ಬೆಂಗಳೂರು: ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಿಗೆ ನಿಜವಾದ ಕಾಳಜಿ ಇದ್ದರೆ ಮುಂದಿನ ಲೋಕಸಭೆ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಿ ಎಂದು ಬಿಜೆಪಿ ಸವಾಲು ಹಾಕಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಆದಿವಾಸಿಗಳು ಮುಖ್ಯಮಂತ್ರಿಗಳಾಗಿದ್ದಾರೆ. ಅದೇ ರೀತಿ ನಾಲ್ಕು ರಾಜ್ಯಗಳಲ್ಲಿ ನಾವು ಹಿಂದುಳಿದವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ನಿಮಗೆ ನಿಜವಾದ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಆದಿವಾಸಿ ಸಮುದಾಯಕ್ಕೆ ಸೇರಿದ ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ನೇಮಕ ಮಾಡಿದ್ದು ನಮ್ಮ ಪಕ್ಷ. ನಾವು ಹೇಗೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ವಿರೋಧಿಗಳಾಗುತ್ತೇವೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್‌ಗೆ ದಲಿತರು, ಹಿಂದುಳಿದ ಅಲ್ಪಸಂಖ್ಯಾತ ವರ್ಗದವರ ಮೇಲೂ ಕಾಳಜಿ ಇಲ್ಲ. ಕೇವಲ ಮೊಸಳೆ ಕಣ್ಣೀರು. ಇದನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಒಪ್ಪುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗದ ನಾಯಕರು. ಗುಜರಾತ್ ಸಿಎಂ ಆಗಿ ಬಳಿಕ ಪ್ರಧಾನಿ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅತ್ಯಂತ ಹಿಂದುಳಿದ ವರ್ಗಗಳ ವ್ಯಕ್ತಿ. ಅವರು ರಾಜರ ಕುಟುಂಬದವರು ಅಲ್ಲ. ಸಿದ್ದರಾಮಯ್ಯ ತರಹ ಲಾಟರಿ ಸಿಎಂ ಆದವರೂ ಅಲ್ಲ ಎಂದು ತಿರುಗೇಟು ನೀಡಿದರು.
ಕಳೆದ 11 ವರ್ಷಗಳಿಂದ ದೇಶ ಸೇವೆ ಮಾಡುತ್ತಿದ್ದಾರೆ. ಮೋದಿಜಿ ಎಲ್ಲೂ ತಾನು ಹಿಂದುಳಿದ ವರ್ಗ ಎಂದು ಸಿದ್ದರಾಮಯ್ಯ ಥರ ರಾಜಕೀಯ ಬೇಳೆ ಬೇಯಿಸಿಕೊಂಡಿಲ್ಲ. ಎಲ್ಲಾ ವರ್ಗಗಳನ್ನು ಜೊತೆಗೂಡಿಸಿಕೊಂಡು ದೇಶ ಮುನ್ನಡೆಸುತ್ತಿದ್ದಾರೆ. ಬಿಜೆಪಿ ಹುಟ್ಟಿನಿಂದ ಸಾಮಾಜಿಕ ವಿರೋಧಿಗಳು ಎಂದು ಸಿದ್ದರಾಮಯ್ಯ ಬಿಂಬಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓಬಿಸಿ ವರ್ಗ, ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಆಗದಿದ್ದರೆ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಬಿಜೆಪಿ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ವಿರೋಧಿ, ಮೀಸಲಾತಿ ಪರವಿರಲಿಲ್ಲ ಎಂದಿದ್ದಾರೆ. ಕಾಂಗ್ರೆಸ್‍ಗೆ ಓಬಿಸಿ, ದಲಿತರು, ಅಲ್ಪಸಂಖ್ಯಾತರ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಗಂಭೀರ ಆರೋಪ ಮಾಡಿದರು.
ಗರಿಗರಿ ಬೆಂಡೆಕಾಯಿ ಮಸಾಲ ಫ್ರೈ: ಪೌಷ್ಟಿಕತೆಗೂ ಟೇಸ್ಟಿಗೂ ಪರಿಪೂರ್ಣ ಕಾಂಬಿನೇಷನ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


