Thursday, November 5, 2026
spot_img
More
    spot_img
    HomeLatest newsಪಂಚಾಯತ್‌ ಚುನಾವಣೆಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಡಿಕೆಶಿ ಪ್ಲಾನ್‌

    ಪಂಚಾಯತ್‌ ಚುನಾವಣೆಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಡಿಕೆಶಿ ಪ್ಲಾನ್‌

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷದ ಸಾಮರ್ಥ್ಯವನ್ನು ಹೆಚ್ಚಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಗ್ರೇಟರ್‌ ಬೆಂಗಳೂರು, ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಚುನಾವಣೆಗಳಲ್ಲೂ ಪಕ್ಷವನ್ನು ಗೆಲ್ಲಿಸುವ ಮೂಲಕ ತನ್ನ ಹಿಡಿತವನ್ನು ಮತ್ತಷ್ಟೂ ಬಿಗಿ ಗೊಳಿಸಲು ಮುಂದಾಗಿದ್ದಾರೆ.

    ಕಾಂಗ್ರೆಸ್‌‍ ಪಕ್ಷದಲ್ಲಿ ದಿನೇದಿನೇ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಮೂಲಕ 2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಮುಖ್ಯಮಂತ್ರಿಯಾಗುವ ಕನಸ್ಸಿನಲ್ಲಿ ಡಿ.ಕೆ.ಶಿವಕುಮಾರ್‌ ಇದ್ದಾರೆ. ಆದರೆ ಪರಮೇಶ್ವರ್‌, ಸತೀಶ್‌ಜಾರಕಿಹೊಳಿ, ಎಂ.ಬಿ. ಪಾಟೀಲ್‌ ಸೇರಿದಂತೆ ಹಲವಾರು ಮಂದಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗುವ ಮೂಲಕ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

    ಇದಕ್ಕಾಗಿ ಪಕ್ಷದ ಮೇಲಿನ ಹಿಡಿತವನ್ನು ಮತ್ತಷ್ಟೂ ಗಟ್ಟಿಗೊಳಿಸಲು, ಈ ಮೂಲಕ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿರುವ ಎಲ್ಲರಿಗೂ ಪ್ರತ್ಯುತ್ತರ ನೀಡಲು ಡಿ.ಕೆ.ಶಿವಕುಮಾರ್‌ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಡಿ.ಕೆ.ಶಿವಕುಮಾರ್‌, 5 ಪಾಲಿಕೆಗಳಲ್ಲೂ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌‍ ಪಕ್ಷದ ಮೇಯರ್‌ಗಳನ್ನು ಆಯ್ಕೆ ಮಾಡುವ ಪಣ ತೊಟ್ಟಿದ್ದಾರೆ. ಇದಕ್ಕಾಗಿ ಈಗಾಗಲೇ ಸಚಿವರ, ಸ್ಥಳೀಯ ಶಾಸಕರ ಹಾಗೂ ವಿಧಾನ ಪರಿಷತ್‌ ಸದಸ್ಯರಗಳನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬರಿಗೂ ಅವರ ಕ್ಷೇತ್ರದಲ್ಲಿ ನೀಡಲಾಗಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.

    ಈ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷದ ರಾಜಕೀಯ ರಣನೀತಿ ನಿರೂಪಕರಾಗಿ ಕೆಲಸ ಮಾಡಿದ್ದ ಸುನೀಲ್‌ ಕನಗೋಳ್‌ ಅವರನ್ನು ಬಿಬಿಎಂಪಿ ಚುನಾವಣೆಯ ಸಂಯೋಜಕರನ್ನಾಗಿ ನೇಮಿಸಲಾಗಿದೆ.

    ಎಲ್ಲಾ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ನಡುವೆ ಸುನೀಲ್‌ ಕನಗೋಳ್‌ ಸಮನ್ವಯಕರಾಗಿದ್ದು, ವಿರೋಧ ಪಕ್ಷಗಳ ವಿರುದ್ಧ ಆಕ್ರಮಣಕಾರಿ ರಣನೀತಿ ರೂಪಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಗ್ರೇಟರ್‌ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದು ತಮ ಅಧಿಪತ್ಯವನ್ನು ಮರು ಸ್ಥಾಪಿಸಲು ಕಾಂಗ್ರೆಸ್‌‍ ಯತ್ನಿಸುತ್ತಿದೆ.

    ಬಿಬಿಎಂಪಿ ಬಿಜೆಪಿಯ ಭದ್ರ ಕೋಟೆಯಾಗಿತ್ತು. ಇಲ್ಲಿ ಮೂರಕ್ಕೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. 28 ವಿಧಾನಸಭಾ ಕ್ಷೇತ್ರಗಳ ಪೈಕಿ 15ರಲ್ಲಿ ಬಿಜೆಪಿ ಶಾಸಕರಿದ್ದಾರೆ.

    ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿರುವ ಜೊತೆಗೆ ಉಪಮುಖ್ಯಮಂತ್ರಿಯಾಗಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ. ಬಿಬಿಎಂಪಿಯ ಚುನಾವಣೆ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರತಿಷ್ಠೆಯ ಜೊತೆಗೆ ಪಕ್ಷದ ಅಳಿವು-ಉಳಿವಿನ ಪ್ರಶ್ನೆ ಕೂಡ ಆಗಿದೆ.

    ಈ ಹಿನ್ನೆಲೆಯಲ್ಲಿ ಆಕ್ರಮಣಕಾರಿಯಾಗಿ ಚುನಾವಣಾ ರಣತಂತ್ರಗಳನ್ನು ರೂಪಿಸಲಾಗುತ್ತದೆ. ಶತಾಯಗತಾಯ ಕಾಂಗ್ರೆಸ್‌‍ ಪಕ್ಷವನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿ.ಕೆ.ಶಿವಕುಮಾರ್‌ ಪಕ್ಷದ ಸಂಪೂರ್ಣ ಬಲವನ್ನು ಗ್ರೇಟರ್‌ ಬೆಂಗಳೂರು ಪಾಲಿಕೆಗಳ ಚುನಾವಣೆಗಳ ಮೇಲೆ ವಿನಿಯೋಗಿಸುತ್ತಿದ್ದಾರೆ.

    ಇಂದು ಕೂಡ ವಿಶೇಷ ಸಭೆ ನಡೆಸಿ ಚುನಾವಣಾ ತಯಾರಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

    ಧರ್ಮಸ್ಥಳ: ದೂರು ಕೊಟ್ಟರೂ ತನಿಖೆ ನಡೆಸದ ಎಸ್‌ಐಟಿ; ಹೈಕೋರ್ಟ್‌ ಮೆಟ್ಟಿಲೇರಿದ ಇಬ್ಬರು ದೂರುದಾರರು!

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search