ವಿಜಯಪುರದ ಶ್ರೀ ಕನೇರಿ ಮಠದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮೂರು ತಿಂಗಳು ವಿಜಯಪುರ ಜಿಲ್ಲೆ ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ. ವಿಜಯಪುರ ಜಿಲ್ಲಾಧಿಕಾರಿಗಳ ಈ ಆದೇಶದ ಬಿಜೆಪಿಗರನ್ನು ಕೆರಳಿಸಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ‘ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಯಥಾವತ್ತಾಗಿ ವಿವರಿಸಿದ್ದಕ್ಕೆ ಶ್ರೀ ಕನೇರಿ ಮಠದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿರವರನ್ನು ವಿಜಯಪುರ ಜಿಲ್ಲೆ ಪ್ರವೇಶಿಸಿದಂತೆ 3 ತಿಂಗಳವರೆಗೂ ನಿರ್ಬಂಧ ಹೇರಿರುವುದು ಸರ್ಕಾರ ಹಿಂದೂ ಸಮಾಜ ಒಡೆಯುವ ಮತ್ತೊಂದು ಹುನ್ನಾರವಷ್ಟೇ. ಸರ್ಕಾರ ಕೂಡಲೇ ಈ ನಿಷೇಧವನ್ನು ವಾಪಾಸ್ ಪಡೆಯಬೇಕು ಈ ರೀತಿಯಾದ ನಿರಂಕುಶ ಧೋರಣೆಯನ್ನು ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, “ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳಿಗೆ ವಿಜಯಪುರಕ್ಕೆ ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ರಾಜಕೀಯ ಪ್ರಾಬಲ್ಯ ಸಾಧಿಸಲು, ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸಲು ಅವರು ಮಾತನಾಡಿದ ಕಾರಣ, ಅವರ ಮೇಲೆ ಈ ಕ್ರಮ ಜರುಗಿಸಲಾಗಿದೆ. ಆತ್ಮನಿರ್ಭರ ಸಮಾಜವನ್ನು ಸ್ಥಾಪಿಸಲು ಅನೇಕ ಉಪಕ್ರಮಗಳನ್ನು ಪರಿಚಯಿಸಿ ಎಲೆಮರಿಕಾಯಿಯಂತೆ ದುಡಿಯುತ್ತಿರುವ ಸರ್ವಸಂಗಪರಿತ್ಯಾಗಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಿರುವುದು ಖಂಡನೀಯ’ ಎಂದು ಹೇಳಿದ್ದಾರೆ.
“ಪೊಲೀಸರನ್ನು, ಜಿಲ್ಲಾಡಳಿತವನ್ನು ಉಪಯೋಗಿಸಿಕೊಂಡು ವಾಕ್ ಸ್ವಾತಂತ್ರ್ಯಹರಣ ಮಾಡುತ್ತಿರುವುದು ಹೇಯ ಹಾಗೂ ಖಂಡನೀಯ. ಇದು ಪ್ರಜಾಪ್ರಭುತ್ವದ ಅಣಕ ಎಂದರೆ ತಪ್ಪಾಗಲಾರದು. ಸರ್ಕಾರ ಕೂಡಲೇ ಈ ನಿಷೇಧವನ್ನು ವಾಪಾಸ್ ಪಡೆಯಬೇಕು ಈ ರೀತಿಯಾದ ನಿರಂಕುಶ ಧೋರಣೆಯನ್ನು ಕೂಡಲೇ ಕೈಬಿಡಬೇಕು. ಒಂದು ವೇಳೆ, ಸ್ವಾಮೀಜಿಗಳಿಗೆ ನಿಷೇಧ ಹೇರಿದರೆ, ವಿಜಯಪುರದ ಬಂದ್ಗೆ ಕರೆ ನೀಡಬೇಕಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತೇನೆ” ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ: ಜಿಲ್ಲಾಧಿಕಾರಿಗಳ ಕಾರ್ಯಾಲಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ ಅವರನ್ನು ವಿಜಯಪುರ ಜಿಲ್ಲೆಗೆ ಭೇಟಿ ನೀಡಲು ಪ್ರತಿಬಂಧಿಸಿ ಆದೇಶ ಹೊರಡಿಸುವ ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿದೆ. ಪೊಲೀಸ್ ಅಧೀಕ್ಷಕರು, ವಿಜಯಪುರ ಇವರ ಪತ್ರವನ್ನು ಉಲ್ಲೇಖಿಸಿದ್ದಾರೆ. ಪೊಲೀಸ್ ಅಧೀಕ್ಷಕರು, ವಿಜಯಪುರ ಇವರು, ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದ ಸಮಾರಂಭದಲ್ಲಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ”ಗುಡ್ಯಾಗ ಹೋಗಬ್ಯಾಡ್ರಿ – ಗುಡ್ಯಾಗ ಹೋಗಬ್ಯಾಡ್ರಿ ಅಂತಾ ಪ್ರಚಾರ ನಡೆದೈತಿ, ತಿಂಗಳ ದೀಡ್ ತಿಂಗಳ ಹಿಂದ ಮಾಡಿದ್ರಪ್ಪಾ, ಮುಖ್ಯಮಂತ್ರಿಗಳ ಕೃಪಾಪೋಷಕ ಲಿಂಗಾಯತ ಮಠಾಧೀಪತಿಗಳ ಒಕ್ಕೂಟ ಕಲಾವಿದರಿಂದ ಕೂಡಿಕೊಂಡತಹ ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನ ತೆಗೆದುಕೊಂಡು ಇಡಿ ಕರ್ನಾಟಕ ರಾಜ್ಯದ ತುಂಬ ತಿರುಗಾಡಿ ದೇವರು ಗುಡಿಯಾಗ ಇಲ್ಲ, ಗುಡ್ಯಾಗ ಹೋಗಬ್ಯಾಡ್ರಿ, ಮನ್ಯಾಗಿನ ದೇವ್ರಗಳನ್ನು ತಗೊಂಡು ಹೊಳ್ಳಾಗ ಹಾಕಿ, ಹೋಟೆಲ್ದಾಗ ಹೋಗಿ ದಾರು ಕುಡಿರಿ, ಅರಾಮಾಗಿರಿ, ಮಾಂಸಾ ತಿನ್ನರಿ, ಅವರನ್ನ ಮುಂದ ಕುದ್ರಸ್ಕೊಂಡ ಆ ಸುಳ ಮಕ್ಕಳಿಗೆ ಬುದ್ದಿ ನಾನೇ ಹೇಳಬೇಕು. ಹಿಡಿದು ಮೆಟ್ಟಿಲೇ ಹೊಡಿಬೇಕ ಅವ್ರಗಿ, ಮೆಟ್ ಮೆಟೇ ಹೊಡಿದ್ರುನು ಕಡಿಮೆ ನೇ” ಅನ್ನುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ.
ಆ ಹಿನ್ನೆಲೆಯಲ್ಲಿ ಗದಗ, ವಿಜಯಪುರ, ಬೀದರ್, ಸಿಂಧನೂರು, ಕೂಡಲಸಂಗಮ, ದಾವಣಗೆರೆ. ಮುದ್ದೇಬಿಹಾಳ, ಬಸವಕಲ್ಯಾಣ, ಹೊಸದುರ್ಗ, ಬೆಳಗಾವಿ, ಚಿಟಗುಪ್ಪ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಮತ್ತು ಮಠಾಧೀಶರು ಪ್ರತಿಕೃತಿಗಳನ್ನು ದಹಿಸಿ, ತಮ್ಮ ಆಕ್ರೋಶ ಹಾಗೂ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿ, ಮನವಿ ಪತ್ರಗಳನ್ನು ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಮೇಲ್ಕಂಡ ವಿಷಯ, ಉಲ್ಲೇಖ ಹಾಗೂ ಕನೇರಿ ಸ್ವಾಮೀಜಿಯವರ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಮಾನ್ಯರವರಲ್ಲಿ ವರದಿ ಸಲ್ಲಿಸುವುದೇನೆಂದರೆ, ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ ರವರು ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಜಿಗಳ ಕುರಿತು ಅವಮಾನಕಾರಿ, ಅವಹೇಳನ, ಮಾನಹಾನಿಕರ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸಬಹುದಾದ ಅಸಂವಿಧಾನಿಕ ಅಶ್ಲೀಲ ಭಾಷೆಗಳನ್ನು ಬಳಸಿದ್ದು ಇರುತ್ತದೆ.
ಕನೇರಿ ಸ್ವಾಮೀಜಿ ಇವರ ಹೇಳಿಕೆಗಳು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೇ ಸಮಾಜದಲ್ಲಿ ಉದ್ರೇಶ ಮತ್ತು ದ್ವೇಷವನ್ನು ಹರಡಲು ಕಾರಣವಾಗುತ್ತದೆ. ಅಲ್ಲದೇ ಲಿಂಗಾಯತ ಧರ್ಮದ ಪೀಠಾಧಿಪತಿಗಳ ಅವಹೇಳನ ಮಾಡಿರುವುದರಿಂದ ಲಿಂಗಾಯತ ಧರ್ಮಿಯರು ರೊಚ್ಚಿಗಳುವ ಸಂಭವವಿರುತ್ತದೆ ಹಾಗೂ ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸದರಿ ಸ್ವಾಮೀಜಿಯವರ ಹೇಳಿಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇನ್ನೂ ಮುಂದಿನ ದಿನಗಳಲ್ಲಿಯೂ ಸಹ ಎಲ್ಲ ಕಡೆಗಳಲ್ಲಿ ಪ್ರತಿಭಟನೆಗಳು ಜರುಗುವ ಸಂಭವವಿದ್ದು, ಬಸವ ಭಕ್ತರ ಮತ್ತು ಲಿಂಗಾಯತ ಸಮಾಜದವರ ತೀವ್ರ ಅಕ್ರೋಶಕ್ಕೆ ಕಾರಣಿಕರ್ತರಾಗಿರುತ್ತಾರೆ ಎಂದು ಪೊಲೀಸ್ ಅಧೀಕ್ಷಕರು, ವಿಜಯಪುರ ವರದಿ ಸಲ್ಲಿಸಿರುತ್ತಾರೆ.
ಮೇಲ್ಕಂಡ ವಿಷಯದ ಹಿನ್ನೆಲೆಯಲ್ಲಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ, ಕನೇರಿ ಮಠ ರವರು ಶ್ರೀ ಸಮರ್ಥ ಸದ್ಗುರು, ಶ್ರೀ ಸಿದ್ಧರಾಮೇಶ್ವರ ಮಹಾರಾಜರ ಪುಣ್ಯತಿಥಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಿನಾಂಕ: 16 & 17-10-2025 ರಂದು ಬಸವನ ಬಾಗೇವಾಡಿಗೆ ಬರುತ್ತಿರುವುದಾಗಿ ತಿಳಿದು ಬಂದಿರುತ್ತದೆ, ಈ ಭೇಟಿ ನೀಡುವ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಎಲ್ಲ ಸಾಧ್ಯತೆಗಳಿವೆ ಎಂದು ಸ್ಥಳೀಯ ಠಾಣಾ ವರದಿಯನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಕಾಡಸಿದ್ದೇಶ್ವರ ಸ್ವಾಮೀಜಿಯವರ ಭೇಟಿಯು ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದ ಹಾಗೆ ಮಾಡಲು ಸದರಿ ಸ್ವಾಮೀಜಿಯವರನ್ನು ಕನಿಷ್ಠ ಪಕ್ಷ 2 ತಿಂಗಳವರೆಗೂ ಬಸವನ ಬಾಗೇವಾಡಿ ಹಾಗೂ ವಿಜಯಪುರ ಜಿಲ್ಲೆಯಾದ್ಯಂತ ಭೇಟಿ ನೀಡುವುದನ್ನು ತುರ್ತಾಗಿ ನಿಷೇಧಿಸಿ ಬಿಎನ್ಎಸ್ಎಸ್ 163 ಕಲಂ, ಅಡಿಯಲ್ಲಿ ಆದೇಶ ಹೊರಡಿಸುವ ಅಗತ್ಯತ ಇರುತ್ತದೆ ಎಂದು ಕೋರಿರುತ್ತಾರೆ.
ಈ ಕುರಿತು ಪರಿಶೀಲಿಸಲಾಗಿ ಸದರಿ ಕಾರ್ಯಕ್ರಮವು ದಿನಾಂಕ: 16-10-2025 ರಂದು ಜರುಗಲಿರುವರಿಂದ, ಆದೇಶಿತ ವ್ಯಕ್ತಿಯ ಮೇಲೆ ನೋಟಿಸನ್ನು ಸಕಾಲದಲ್ಲಿ ಜಾರಿಗೊಳಿಸಲು ಅವಕಾಶವಿರದ ತುರ್ತು ಪರಿಸ್ಥಿತಿಯು ಕಂಡು ಬರುತ್ತದೆ. ಅದ್ದರಿಂದ ಈ ಪ್ರಕರಣದ ಮೇರೆಗಿನ ಆದೇಶವನ್ನು ಕಲಂ 163 (2) ರನ್ವಯ ex parte ಮಾಡುವಂತಹ ಪರಿಸ್ಥಿತಿ ಇರುವುದು ಮನವರಿಕೆಯಾಗಿ ಸಾರ್ವಜನಿಕ ಶಾಂತತ, ಸುವ್ಯವಸ್ಥೆಗೆ ಸದರಿಯವರಿಂದ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮಕೈ ಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟು ಈ ಕೆಳಗಿನಂತೆ ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಮೇಲಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವಿಜಯಪುರ ಅದ ನಾನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2029 ರ ಕಲಂ.163 (1), (2) ಮತ್ತು (3) ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ ಬೀಳೂರು ಗ್ರಾಮ ತಾಲೂಕ ಜತ್ತ ಮಹಾರಾಷ್ಟ್ರ ರಾಜ್ಯ ಇವರನ್ನು ವಿಜಯಪುರ ಜಿಲ್ಲೆಯಲ್ಲಿ ಸಾರ್ಜನಿಕ ಶಾಂತತೆಗೆ ಧಕ್ಕೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ದಿನಾಂಕ: 10 -10-2025 ರಿಂದ 14-12-2025 ರವರೆಗೆ ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಿಸಿ ಆದೇಶಿಸಿರುತ್ತೇನೆ ಎಂದು ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


