ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರ ನಿನ್ನೆಯಷ್ಟೇ ( ನವೆಂಬರ್ 15 ) ರಾಜ್ಯಾದ್ಯಂತ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ಚಿತ್ರದ ಕುರಿತು ಮೆಚ್ಚುಗೆ ಒಂದೆಡೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಪುನೀತ್ ರಾಜ್‌ಕುಮಾರ್ ಅವರ ಕೆಲ ಅಭಿಮಾನಿಗಳು ಚಿತ್ರದಲ್ಲಿ ಅಪ್ಪುಗೆ ಗೌರವ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಹೌದು, ಭೈರತಿ ರಣಗಲ್ ಚಿತ್ರಕ್ಕೆ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಬಂಡವಾಳ ಹೂಡಿದ್ದು, ಮನೆಯವರೇ ಆದ ನೀವೇ ಅಪ್ಪು ನೆನಪು ಮಾಡಿಕೊಳ್ಳದಿದ್ದರೆ ಬೇರೆಯವರು ಹೇಗೆ ನೆನಪಿಸಿಕೊಳ್ತಾರೆ ಎಂಬ ಪ್ರಶ್ನೆ ಹಾಕಿದ್ದಾರೆ.
ಇನ್ನು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾಗಲೂ ಕರೆ ಮಾಡಿದ ಅಪ್ಪು ಅಭಿಮಾನಿಯೋರ್ವಿ ಇದೇ ವಿಷಯದ ಕುರಿತು ಚರ್ಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್‌ಕುಮಾರ್ ʼಯಾಕೆ ನನ್ನ ಮುಖದಲ್ಲಿ ಅಪ್ಪು ಕಾಣಸಿಲ್ವ? ನಾನು ಯಾವಾಗಲೂ ಒಂದು ಫೋಟೊ ಹಾಕಿ ಅವನನ್ನು ದೂರ ತಳ್ಳಲು ಇಷ್ಟಪಡಲ್ಲ. ಏಕೆಂದರೆ ಅವನು ಹೋಗಿದ್ದಾನೆ ಎಂದು ನಾನು ಭಾವಿಸುವುದಿಲ್ಲ. ನಮ್ಮ ಜೊತೆಯಲ್ಲೇ ಇದ್ದಾನೆ. ನನ್ನ ತಮ್ಮನನ್ನು ಹೇಗೆ ಪ್ರೀತಿಸಬೇಕೆಂದು ನನಗೆ ಗೊತ್ತಿಲ್ವಾ? ಅಪ್ಪು ಸಿನಿಮಾ ಅಂದ್ರೆ ನಿಮಗಿಂತ ಮೊದಲೇ ನಾನೇ ಹೋಗಿ ಕೂತಿರುತ್ತೇನೆ. ಇತ್ತೀಚೆಗೆ ಜಾಕಿಗೂ ಸಹ ಹೋಗಿದ್ದೆ. ನೀವು ಇವತ್ತು ಅಭಿಮಾನಿಯಾಗಿದ್ದೀರ, ನೀವು ಅಭಿಮಾನಿಯಾಗುವ ಮುನ್ನ ನಾನು ಅಪ್ಪುಗೆ ಅಭಿಮಾನಿ. ಇದನ್ನೆಲ್ಲಾ ಬಿಟ್ಟು ಸಿನಿಮಾನ ಸಿನಿಮಾ ತರಹ ನೋಡಿ. ಅಪ್ಪು ನನ್ನಲ್ಲಿದ್ದಾನೆ, ನಿಮ್ಮಲ್ಲಿದ್ದಾನೆʼ ಎಂದು ಹೇಳಿಕೆ ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


