ನಿನ್ನೆ ( ನವೆಂಬರ್ 15 ) ಹೈದರಾಬಾದ್‌ನಲ್ಲಿ ರಾಜಮೌಳಿ ನಿರ್ದೇಶನ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಗ್ಲೋಬ್‌ಟ್ರಾಟರ್ ಎಂಬ ತಾತ್ಕಾಲಿಕ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರದ ಕುರಿತಾದ ಟೀಸರ್ ಪ್ರಸಾರ ಮಾಡಿ ಶೀರ್ಷಿಕೆಯನ್ನು ಅನಾವರಣ ಮಾಡಲಾಯಿತು.
ಚಿತ್ರಕ್ಕೆ ʼವಾರಣಾಸಿʼ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಮಹೇಶ್ ಬಾಬು ರುದ್ರ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 3 ನಿಮಿಷ 41 ಸೆಕೆಂಡುಗಳ ಟೀಸರ್‌ನಲ್ಲಿ ಅಂಟಾರ್ಟಿಕಾದಿಂದ ಆಫ್ರಿಕಾವರೆಗಿನ ಪಯಣ, ಕ್ರಿಸ್ತಪೂರ್ವ 72000 ಸಮಯದಲ್ಲಿನ ಹನುಮಾನ್ ದರ್ಶನವನ್ನು ತೋರಿಸಲಾಗಿದ್ದು, ಇದು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಹೀಗೆ ಖಂಡದಿಂದ ಖಂಡ ಹಾಗೂ ಯುಗಗಳಿಂದ ಯುಗಗಳ ಪಯಣವನ್ನು ತೆರೆ ಮೇಲೆ ನೋಡಲು ಸಿದ್ಧರಾಗಿ ಎಂಬ ಸಂದೇಶವನ್ನು ಸಾರಿದ ಟೀಸರ್ ಕೊನೆಯಲ್ಲಿ ವಾರಣಾಸಿಯ ಪ್ರಸಿದ್ಧ ಮಣಿಕರ್ಣಿಕ ಘಾಟ್‌ಗೆ ಬಂದು ತಲುಪಲಿದೆ.
ಇಲ್ಲಿ ಮಹೇಶ್ ಬಾಬು ಗೂಳಿಯ ಮೇಲೆ ಕುಳಿತು ಕೈನಲ್ಲಿ ತ್ರಿಶೂಲ ಹಿಡಿದು ಚಿತ್ರದಲ್ಲಿ ರುದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೀಗೆ ಟೀಸರ್ ತುಂಬಾ ಹಿಂದೂ ಪುರಾಣಗಳ ಉಲ್ಲೇಖ, ಅಲ್ಲದೇ ಶಿವನಿಂದ ಸ್ಪೂರ್ತಿ ಪಡೆದ ಮಹೇಶ್ ಬಾಬು ಪಾತ್ರ ವೀಕ್ಷಕರ ಹೃದಯ ಗೆದ್ದಿತ್ತು.
ಅದಕ್ಕೂ ಮುನ್ನ ಚಿತ್ರದ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಾತನಾಡಿ ಹನುಮನಿರುತ್ತಾನೆ, ಬೆನ್ನ ಹಿಂದೆ ನಿಂತು ಎದೆ ತಟ್ಟಿ ಮುನ್ನಡೆಸುತ್ತಾನೆ ಎಂದರು. ಬಳಿಕ ಮಾತನಾಡಿದ ರಾಜಮೌಳಿ ತಂದೆಯ ಈ ಹೇಳಿಕೆಯನ್ನು ವಿರೋಧಿಸಿದರು. ಹೌದು, ರಾಜಮೌಳಿ ಮಾತನಾಡುವುದಕ್ಕೂ ಮುನ್ನ ಚಿತ್ರದ ಟೀಸರ್ ಅನ್ನು ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ದೊಡ್ಡ ಎಲ್‌ಇಡಿ ಪರದೆಯಲ್ಲಿ ಪ್ರಸಾರ ಮಾಡಬೇಕಿತ್ತು. ಆದರೆ ಕೆಲ ಸಮಸ್ಯೆಗಳಿಂದ ಟೀಸರ್ ಪ್ರಸಾರವಾಗಲಿಲ್ಲ. ಕೆಲ ಪ್ರಯತ್ನಗಳ ಬಳಿಕ ಕೊನೆಗೂ ಟೀಸರ್ ಪ್ರಸಾರವಾಯಿತು.
ಹೀಗೆ ತಡವಾಗಿ ಟೀಸರ್ ಪ್ರಸಾರವಾಗಿ ಮುಗಿದ ಬಳಿಕ ಅಂತೂ ಇಂತೂ ಟೀಸರ್ ಪ್ರಸಾರವಾಯಿತು ಎಂದು ಮಾತು ಆರಂಭಿಸಿದ ರಾಜಮೌಳಿ ನನಗೆ ದೇವರ ಮೇಲೆ ದೊಡ್ಡ ನಂಬಿಕೆಯಿಲ್ಲ, ಇದಕ್ಕೂ ಮುನ್ನ ನನ್ನ ತಂದೆಯವರು ಹನುಮ ಬೆನ್ನ ಹಿಂದೆ ಇರುತ್ತಾನೆ, ಎದೆ ತಟ್ಟಿ ಮುನ್ನಡೆಸುತ್ತಾನೆ ಎಂದು ಹೇಳಿದರು. ಅದನ್ನು ಕೇಳಿ ಕೋಪ ಬಂತು ಇದೇನಾ ಆತ ಮುನ್ನಡೆಸುವುದು ಅಂತ. ನನ್ನ ಪತ್ನಿಗೂ ಸಹ ಹನುಮನೆಂದರೆ ಇಷ್ಟ, ಸ್ನೇಹಿತನ ಹಾಗೆ ನೋಡುತ್ತಾಳೆ. ಆಕೆಯ ಮೇಲೆ ಸಹ ಕೋಪ ಬಂತು ಎಂದರು.
ಈ ಮೂಲಕ ಹನುಮ ಹಿಂದೆ ನಿಂತು ಮುನ್ನಡೆಸುತ್ತಾನೆ ಎನ್ನುವ ನಿಮ್ಮ ಚಿತ್ರದ ಟೀಸರ್ ಸರಿಯಾದ ಸಮಯಕ್ಕೆ ಪ್ರಸಾರವಾಗದೇ ಇದ್ದಾಗ ಹನುಮ ಮುನ್ನಡೆಸಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದು, ರಾಜಮೌಳಿ ಮತ್ತೊಮ್ಮೆ ತಾನು ನಾಸ್ತಿಕ ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


