ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಒಟ್ಟು 243 ಕ್ಷೇತ್ರಗಳಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭಾರೀ ಅಂತರದಿಂದ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕಾರಕ್ಕೆ ಬರಲು 122 ಸೀಟುಗಳಲ್ಲಿ ಗೆಲ್ಲಬೇಕಿದ್ದ ಕಡೆ ಎನ್‌ಡಿಎ ಬರೋಬ್ಬರಿ 202 ಸೀಟುಗಳನ್ನು ಪಡೆದು ಭಾರೀ ಸಂಚಲನ ಸೃಷ್ಟಿಸಿತ್ತು.
ಎನ್‌ಡಿಎ 202 ಕ್ಷೇತ್ರಗಳಲ್ಲಿ ಗೆದ್ದರೆ, ಮಹಾಘಟ್‌ಬಂಧನ್ 34 ಕ್ಷೇತ್ರಗಳಲ್ಲಿ ಗೆದ್ದಿತು ಹಾಗೂ ಉಳಿದ 7 ಕ್ಷೇತ್ರಗಳು ಪಕ್ಷೇತರರ ಪಾಲಾಗಿತ್ತು. ಚುನಾವಣೆ ಆರಂಭಕ್ಕೂ ಮುನ್ನ ಬಿಹಾರದಲ್ಲಿ ಜನರು ಬದಲಾವಣೆ ಬಯಸಿದ್ದು, ಮಹಾಘಟ್‌ಬಂಧನ್ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದ್ದಾರೂ ಮಹಾಘಟ್‌ಬಂಧನ್ ಕೇವಲ 34ರಲ್ಲಿ ಗೆದ್ದು ಭಾರೀ ಮುಖಭಂಗಕ್ಕೊಳಗಾಗಿದೆ.
ಹೀಗೆ ಚುನಾವಣೆಗೂ ಮುನ್ನ ಇದ್ದ ಚಿತ್ರಣಕ್ಕೂ ಫಲಿತಾಂಶದ ನಂತರದ ಅಸಲಿಯತ್ತಿಗೂ ಭಾರೀ ವ್ಯತ್ಯಾಸ ಕಂಡುಬಂದಿದ್ದು, ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರು ಮತ್ತೆ ವೋಟ್ ಚೋರಿ ಆರೋಪವನ್ನು ಮಾಡುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೊಂದನ್ನು ಹಂಚಿಕೊಂಡಿದ್ದು, ಚುನಾವಣೆಗೂ ಮುನ್ನ ಬಿಹಾರದಲ್ಲಿ ಒಟ್ಟು 7.42 ಕೋಟಿ ಮತದಾರರು ಇದ್ದಾರೆ ಎಂದು ಘೋಷಿಸಿದ್ದ ಚುನಾವಣಾ ಆಯೋಗ ಆದರೆ ಚುನಾವಣೆಯ ಬಳಿ ಅದು ಇದ್ದಕ್ಕಿದ್ದಂತೆ 7.45 ಕೋಟಿಯಾಗಿಬಿಟ್ಟಿದೆ ಎಂದು ಆರೋಪಿಸಿದೆ.
ಇನ್ನು ಎಸ್‌ಐಆರ್ ಅಡಿಯಲ್ಲಿ ಒಟ್ಟು 69 ಲಕ್ಷ ಮತದಾರರನ್ನು ಡಿಲಿಟ್ ಮಾಡಲಾಗಿದೆ, ಅಲ್ಲದೇ ಚುನಾವಣಾ ಆಯೋಗ ನಕಲಿ ಮತದಾರರನ್ನು ಹುಡುಕುವ ಸಾಫ್ಟ್‌ವೇರ್ ಬಳಸಿಲ್ಲ. ಈ ಹಿಂದೆ ಉತ್ತರಾಖಂಡ, ದೆಹಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದ ಬಿಜೆಪಿಯ ಕಾರ್ಯಕರ್ತರು ಇಲ್ಲಿಯೂ ಮತದಾನ ಮಾಡಿದ್ದಾರೆ. ಅಲ್ಲದೇ ಬಿಹಾರ ಚುನಾವಣೆಗೆ 14.35 ಲಕ್ಷ ಅನುಮಾನಾಸ್ಪದ ನಕಲಿ ಮತದಾರರ ಪ್ರವೇಶವಾಗಿದೆ. ಕೊನೆಯದಾಗಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಮೋದಿ ಮಹಿಳಾ ಮತದಾರರ ಖಾತೆಗೆ ತಲಾ 10 ಸಾವಿರವನ್ನು ಹಾಕಿದರು. ಇದನ್ನೆಲ್ಲ ನೋಡಿ ನಿಮ್ಮನ್ನೇ ನೀವು ಕೇಳಿಕೊಳ್ಳಿ ಇವುಗಳಲ್ಲಿ ಯಾವುದಾದರೊಂದು ಸರಿಯಾದ ಚುನಾವಣೆ ಪ್ರಕ್ರಿಯೆಯ ರೀತಿ ಇದೆಯೇ? ಅಥವಾ ಚೆನ್ನಾಗಿ ಯೋಜನೆ ರೂಪಿಸಿ ಮಾಡಿದ ವೋಟ್ ಚೋರಿ ರೀತಿ ಇದೆಯೇ? ಇದು ಚುನಾವಣಾ ಆಯೋಗದಿಂದ ನಿರ್ಮಿಸಲ್ಪಟ್ಟ ಹಾಗೂ ಮೋದಿಯಿಂದ ನಿರ್ದೇಶಿಸಲ್ಪಟ್ಟ ವೋಟ್ ಚೋರಿಯಾಗಿದೆ ಎಂದು ಉಲ್ಲೇಖಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


