ಕಳೆದ ಗುರುವಾರ ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಬಿಡುಗಡೆಯಾಗಿತ್ತು. ತಾರಕ್ ಬಳಿಕ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಸಾಮಾನ್ಯ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದರ್ಶನ್‌ಗಿರುವ ದೊಡ್ಡ ಮಟ್ಟದ ಅಭಿಮಾನಿಗಳ ಬಳಗದ ಸಲುವಾಗಿ ಚಿತ್ರ ಮೊದಲ ದಿನ ಭರ್ಜರಿಯಾಗಿ ಬಿಡುಗಡೆಯಾಗಿ, ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ರಾಜ್ಯದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಡೆವಿಲ್ ಬಿಡುಗಡೆಯ ದಿನ 13.8 ಕೋಟಿ ಗಳಿಕೆಯನ್ನು ಮಾಡಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಘೋಷಿಸಿತ್ತು.
ಆದರೆ ನಂತರದ ದಿನಗಳ ಗಳಿಕೆಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇತ್ತ ಬಾಕ್ಸ್ ಆಫೀಸ್ ಕಲೆಕ್ಷನ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ಚಿತ್ರ ಯಾವ ದಿನ ಎಷ್ಟು ಗಳಿಕೆ ಮಾಡಿದೆ ಎಂಬ ವರದಿಯನ್ನು ಪ್ರಕಟಿಸಿವೆ. ಅದರಲ್ಲೂ ಜನಪ್ರಿಯ ಸ್ಯಾಕ್‌ನಿಕ್ ವೆಬ್‌ಸೈಟ್ ದರ್ಶನ್ ನಟನೆಯ ಡೆವಿಲ್ ಬಿಡುಗಡೆಯ ದಿನದಿಂದ ನಿನ್ನೆ ( ಡಿಸೆಂಬರ್ 15 ) ಸೋಮವಾರ ಐದನೇ ದಿನದವರೆಗೆ ಎಷ್ಟು ಗಳಿಕೆ ಮಾಡಿದೆ ಎಂಬ ವರದಿಯನ್ನು ಪ್ರಕಟಿಸಿದ್ದು, ಅದರ ಮಾಹಿತಿ ಮುಂದಿದೆ.
ಸ್ಯಾಕ್‌ನಿಕ್ ಪ್ರಕಾರ ಡೆವಿಲ್ ಮೊದಲ ದಿನ 10 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 3.4, ಮೂರನೇ ದಿನ 3.8, ನಾಲ್ಕನೇ ದಿನ 4 ಹಾಗೂ ಐದನೇ ದಿನ 1.4 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಐದು ದಿನಗಳಲ್ಲಿ ಒಟ್ಟು 22 ಕೋಟಿ 60 ಲಕ್ಷ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಸ್ಯಾಕ್‌ನಿಕ್ ಕೇವಲ ನೆಟ್ ಕಲೆಕ್ಷನ್ ಅನ್ನು ಮಾತ್ರ ಪ್ರಕಟಿಸಿದ್ದು, ಗ್ರಾಸ್ ಕಲೆಕ್ಷನ್ ಗಣನೆಗೆ ತೆಗೆದುಕೊಂಡರೆ ಅಂದಾಜು 30 ಕೋಟಿ ತಲುಪುವ ಸಾಧ್ಯತೆಯಿದೆ. ಇನ್ನು ಕಲೆಕ್ಷನ್ ವಿಚಾರದಲ್ಲಿ ಗೊಂದಲವಿದ್ದು, ಸದ್ಯ ಸ್ಯಾಕ್‌ನಿಕ್ ವರದಿಯನ್ನೇ ಎಲ್ಲರೂ ಪರಿಗಣಿಸುತ್ತಿದ್ದಾರೆ. ಚಿತ್ರತಂಡ ಅಧಿಕೃತವಾಗಿ ಕಲೆಕ್ಷನ್ ಘೋಷಿಸಿ ಈ ಗೊಂದಲಗಳಿಗೆ ತೆರೆ ಎಳೆಯಲಿದೆಯಾ ಎಂಬುದನ್ನು ನೋಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


