ಬಿಹಾರ ವಿಧಾನಸಭೆ ಚುನಾವಣೆಯ ಬಳಿಕ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕಿಯನ್ನು ಭೇಟಿಯಾಗಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ವಿರುದ್ಧವೇ ಸ್ಪರ್ಧೆ ಮಾಡಿದ್ದ ಪ್ರಶಾಂತ್ ಕಿಶೋರ್ 243 ಸೀಟುಗಳಲ್ಲಿ ಒಂದು ಸೀಟು ಗೆಲ್ಲಲು ಸಹ ವಿಫಲರಾಗಿದ್ದರು.
ಪ್ರಶಾಂತ್ ಕಿಶೋರ್ ಸೋನಿಯಾ ಗಾಂಧಿ ನಿವಾಸದಲ್ಲಿ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಭೇಟಿ ಮಾಡಿದ್ದಾರೆ. ಈ ಭೇಟಿ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ. ಸುಮಾರು ಮೂರು ವರ್ಷಗಳಿಂದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಸ್ಪರ್ಧೆ ಮಾಡಿರಲಿಲ್ಲ. ಆದರೆ ಅವರ ಜನ ಸುರಾಜ್ ಪಕ್ಷ ಒಂದು ಸೀಟು ಗೆಲ್ಲಲು ಸಹ ವಿಫಲವಾಗಿತ್ತು. ಕಾಂಗ್ರೆಸ್ 61 ಸೀಟುಗಳಲ್ಲಿ ಕಣಕ್ಕಿಳಿದು ಕೇವಲ 6 ಸೀಟುಗಳಲ್ಲಿ ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿತ್ತು.
ಪ್ರಶಾಂತ್ ಕಿಶೋರ್ ಭೇಟಿ: 2026ರಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ವಾದ್ರಾ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಸುಮಾರು ಒಂದು ಗಂಟೆಗಳ ಕಾಲ ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ವಾದ್ರಾ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಪ್ರಶಾಂತ್ ಕಿಶೋರ್ ಭೇಟಿ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ವಾದ್ರಾ, “ನಾನು ಯಾರನ್ನು ಭೇಟಿ ಮಾಡಿದೆ, ಯಾರನ್ನು ಭೇಟಿಯಾಗಿಲ್ಲ ಎಂಬುದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ” ಎಂದು ಹೇಳಿದರು.
ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ವಾದ್ರಾ ಭೇಟಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಈ ಭೇಟಿ ಬಗ್ಗೆ ಪ್ರಶಾಂತ್ ಕಿಶೋರ್ ಅಥವ ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಬಿಹಾರ ವಿಧಾನಸಭೆ ಚುನಾವಣೆ ಮತ್ತು ಎರಡೂ ಪಕ್ಷಗಳ ಫಲಿತಾಂಶದ ಕುರಿತು ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ವಾದ್ರಾ ಚರ್ಚೆಯನ್ನು ನಡೆಸಿದ್ದಾರೆ. ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 13 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಕೇವಲ 6 ಸೀಟು ಗೆದ್ದಿದೆ.
ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ಪಕ್ಷ ಹಲವು ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ಮಿಶ್ರ ಫಲಿತಾಂಶವೂ ಬಂದಿದೆ. 2017ರ ಪಂಜಾಬ್ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಜೊತೆ ಇದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಪಕ್ಷ ಜಯಗಳಿಸಿತ್ತು. ಆದರೆ ಅದೇ ವರ್ಷ ಕಾಂಗ್ರೆಸ್-ಸಮಾಜವಾದಿ ಪಕ್ಷದ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಸೋಲು ಕಂಡಿತ್ತು.
ಮಾಹಿತಿಗಳ ಪ್ರಕಾರ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರ ರೂಪಿಸುವ ವಿಚಾರದಲ್ಲಿ ಪ್ರಿಯಾಂಕಾ ವಾದ್ರಾ ಆಸಕ್ತಿ ಹೊಂದಿದ್ದಾರೆ ಮತ್ತು ಮುಂಬರುವ ರಾಜ್ಯಗಳ ವಿಧಾಸನಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಪಕ್ಷದ ಜೊತೆ ಕೆಲಸ ಮಾಡಲು, ಅವರಿಗೆ ಸಂಪೂರ್ಣ ಸ್ವತಂತ್ರ್ಯ ನೀಡಲು ಬಯಸಿದ್ದಾರೆ.
ಆದರೆ ಈ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಚರ್ಚೆ ನಡೆಸಿಲ್ಲ, ಒಪ್ಪಿಗೆಯನ್ನು ನೀಡಿಲ್ಲ. 2021ರಲ್ಲಿ ಪುಸ್ತಕವೊಂದನ್ನು ಬರೆದಿದ್ದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯದ ಕಾರಣ ತಮಗೆ ಹಿನ್ನಡೆ ಆಯಿತು ಎಂದು ಉಲ್ಲೇಖಿಸಿದ್ದರು.
2026ರಲ್ಲಿ ನಡೆಯುವ 5 ರಾಜ್ಯಗಳ ವಿಧಾನಸಭೆ ಚುನಾವಣೆ, 2027ರ ಉತ್ತರ ಪ್ರದೇಶ ಚುನಾವಣೆ ಹಾಗೂ 2029ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ವಾದ್ರಾ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


