ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಸದಾ ಚರ್ಚೆಯ ವಿಷಯ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಲ್ಲಿಯೂ ಈ ಕುರಿತು ಚರ್ಚೆ ನಡೆಸಲು ಮನವಿ ಸಲ್ಲಿಸಲಾಗಿತ್ತು.
ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳ ಕುರಿತು ಚರ್ಚಿಸಲು ಸಮಯ ನಿಗದಿಗೊಳಿಸಲು ಕೋರಿ ಸ್ಪೀಕರ್ ಯು.ಟಿ.ಖಾದರ್‌ಗೆ ಪತ್ರವನ್ನು ಬರೆದಿದ್ದರು.
ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಳ್ಳಲಿದೆ. ಆದರೆ ಇನ್ನೂ ಸಹ ಸರ್ಕಾರಿ ಶಾಲೆಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಿಲ್ಲ. ಆದ್ದರಿಂದ ಪತ್ರದ ಮೂಲಕ ಎಸ್.ಸುರೇಶ್ ಕುಮಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಪತ್ರದ ವಿವರಗಳು: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಕಳೆದ ಗುರುವಾರ ಅಂದರೆ 11/12/2025 ರಂದು ಪ್ರಶ್ನೋತ್ತರ ಸಮಯದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗುತ್ತಿರುವ ಹಾಗೂ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಕುರಿತು ನನ್ನ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 43 ಬಂದಿತ್ತು.
ಮಾನ್ಯ ಶಿಕ್ಷಣ ಸಚಿವರು ಅಂದು ಬಹಳ ದೀರ್ಘವಾದ ಲಿಖಿತ ಉತ್ತರವನ್ನು ನೀಡಿ, ಈ ಕುರಿತು ಒಂದು ದಿನದ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದ್ದರು. ತಾವೂ ಸಹ ಈ ಕುರಿತು ಒಂದು ದಿವಸದ ಚರ್ಚೆಗೆ ಅವಕಾಶ ನೀಡಲು ಒಪ್ಪಿಕೊಂಡಿದ್ದೀರಿ.
ನಿನ್ನೆ ಸೋಮವಾರ 15/12/2025ರಂದು ಸದನದ ಹಿರಿಯ ಸದಸ್ಯ ಹಾಗೂ ಮಾಜಿ ಸಚಿವರಾದ ಶ್ರೀ ಶಾಮನೂರು ಶಿವಶಂಕರಪ್ಪನವರು ನಿಧನರಾದ ಹಿನ್ನೆಲೆಯಲ್ಲಿ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಇನ್ನು ನಮಗೆ ಉಳಿದಿರುವುದು ಕೇವಲ 4 ದಿನ.
ಸದನದಲ್ಲಿ ಇನ್ನೂ ಸಹ ಉತ್ತರ ಕರ್ನಾಟಕದ ಬಗ್ಗೆ ನಡೆದಿರುವ ಸುದೀರ್ಘ ಚರ್ಚೆಗೆ ಸರ್ಕಾರ ಉತ್ತರ ನೀಡಬೇಕಾಗಿದೆ ಹಾಗೂ ಸುಮಾರು 15 ಹೆಚ್ಚು ವಿಧೇಯಕಗಳ ಬಗ್ಗೆ ಮತ್ತು ನಿಯಮ 69 ಅಡಿ ಇನ್ನಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದೆ.
ಹೀಗಿರುವಾಗ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಹಾಗೂ ಒಟ್ಟಾರೆ ಸರ್ಕಾರಿ ಶಾಲೆಗಳ ಭವಿಷ್ಯ ಕುರಿತು ಚರ್ಚೆಗೆ ಅವಕಾಶ ಸಿಗುವುದರ ಬಗ್ಗೆ ನನಗೆ ತೀವ್ರ ಅನುಮಾನವಿದೆ.
ಮಾನ್ಯರೇ ಇದೊಂದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಲ್ಲಿ ಅತ್ಯಂತ ಗಂಭೀರವಾದ ವಿಷಯವೆಂಬುವುದನ್ನು ತಾವು ಒಪ್ಪುತ್ತೀರಿ ಮತ್ತು ಈ ಕುರಿತು ನಾವೆಲ್ಲರೂ ಒಟ್ಟಾಗಿ ಉತ್ತಮ ನಿರ್ಧಾರ ತೆಗೆದುಕೊಂಡು ಸರ್ಕಾರಿ ಶಾಲೆಗಳ ಸುಧಾರಣೆ ಕುರಿತು ಹೆಜ್ಜೆ ಹಾಕುವ ಅಗತ್ಯವಿದೆ.
ಭವಿಷ್ಯದ ಸದೃಢ ಸಮಾಜದ ನಿರ್ಮಾಣದ ವಿಷಯವಿದು. ಆದ್ದರಿಂದ ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಧಿವೇಶನದ ಸದನದಲ್ಲಿ ಚರ್ಚಿಸಲು ಅವಕಾಶ ಸಿಗದೇ ಇದ್ದ ಪಕ್ಷದಲ್ಲಿ, ಈ ಕುರಿತು ಚರ್ಚಿಸಿ ಆರೋಗ್ಯಕರ ಕ್ರಮಗಳನ್ನು ಶಿಫಾರಸ್ಸು ಮಾಡಲು ಜನವರಿ ತಿಂಗಳಲ್ಲಿ ಈ ಗಂಭೀರ ವಿಚಾರದ ಕುರಿತು ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಬೇಕೆಂದು ಅಥವಾ ಈ ಕುರಿತು ಚರ್ಚಿಸಿ, ಸರ್ಕಾರಿ ಶಾಲೆಗಳ ಉಳಿವು ಹಾಗೂ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳ ಕುರಿತಂತೆ ಶಿಫಾರಸು ಮಾಡಲು, ಸದನ ಸಮಿತಿ ರಚಿಸಲು ತಾವು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


