ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹಾಗೂ ವಿವಾದವನ್ನು ಹುಟ್ಟುಹಾಕಿರುವ ಜಾತಿ ಗಣತಿ ವರದಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಕೈ ಸೇರಿದೆ. ಮೂರು ದಿನಗಳ ಹಿಂದೆಯೇ ಸಚಿವರಿಗೆ ಜಾತಿಗಣತಿಯಲ್ಲಿನ ಅಂಶಗಳನ್ನು ಅಧ್ಯಯನ ಮಾಡಿಕೊಂಡು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿದ್ಧರಾಗಿ ಎಂದು ಸಿದ್ದರಾಮಯ್ಯ ಕರೆಕೊಟ್ಟಿದ್ದರು.
ಅಲ್ಲಿಂದ ಇಲ್ಲಿಯವರೆಗೆ ಜಾತಿಗಣತಿ ವರದಿ ಪರ ವಿರೋಧ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಲೇ ಇದ್ದು, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ನಾಯಕರಿಂದ ವರದಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಅತ್ತ ಸಮುದಾಯದ ಅಧ್ಯಕ್ಷರು ಜಾತಿಗಣತಿ ವರದಿಯಲ್ಲಿ ಸೋರಿಕೆಯಾಗಿದೆ ಎನ್ನಲಾದ ಜಾತಿ ಜನಸಂಖ್ಯೆ ಅಂಕಿಅಂಶಗಳನ್ನು ವಿರೋಧಿಸುತ್ತಿದ್ದು, ಇದು ಅವೈಜ್ಞಾನಿಕ ಮತ್ತೊಮ್ಮೆ ಹೊಸದಾಗಿ ಜಾತಿಗಣತಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಯಾವುದೇ ಟೀಕೆಗೂ ಕಿವಿಗೊಡದ ಸಿದ್ದರಾಮಯ್ಯ ಚರ್ಚೆ ನಡೆಯಲಿ ತದನಂತರ ವರದಿಯ ಬಗ್ಗೆ ಮಾತನಾಡೋಣ, ಸಚಿವ ಸಂಪುಟ ಸಭೆಯಾಗುವವರೆಗೂ ಅದರ ಬಗ್ಗೆ ಚರ್ಚೆ ಮಾಡಲ್ಲ ಎಂದಿದ್ದರು.
ಹೀಗೆ ಸಿದ್ದರಾಮಯ್ಯ ಜಾತಿಗಣತಿ ವರದಿಗೆಂದೇ ಇಂದಿನ ( ಏಪ್ರಿಲ್ 17 ) ಸಚಿವ ಸಂಪುಟ ಸಭೆಯನ್ನು ನಿಶ್ಚಯಿಸಿದ್ದು, ಸದ್ಯ ಕೇಂದ್ರದ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ನಾಯಕರು ಭಾಗಿಯಾಗಿದ್ದಾರೆ. ಈ ಪ್ರತಿಭಟನೆ ಮುಗಿದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಜಾತಿಗಣತಿ ಕುರಿತಾದ ಚರ್ಚೆ ಆರಂಭವಾಗಲಿದ್ದು, ಸಭೆಯ ಬಳಿಕ ಏನೆಲ್ಲ ಅಭಿಪ್ರಾಯಗಳನ್ನು ಸಚಿವರು ವ್ಯಕ್ತಪಡಿಸಲಿದ್ದಾರೆ ಹಾಗೂ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


