ಬೆಳಗಾವಿ: ರಾಜ್ಯದಲ್ಲಿ ಗೃಹಲಕ್ಷಿ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗ ಹಣ ಪಾವತಿಯಾಗದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಸಚಿವರ ರಾಜೀನಾಮೆಗೆ ಪಟ್ಟು ಹಿಡಿದು ವಿರೋಧ ಪಕ್ಷಗಳು ಧರಣಿ ನಡೆಸಿದ್ದವು. ಪರಿಸ್ಥಿತಿ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಸದನವನ್ನು ಕೆಲಕಾಲ ಮುಂದೂಡಲಾಯಿತು.
ಗೃಹ ಲಕ್ಷ್ಮೀ ಯೋಜನೆಯಡಿ 2025ರ ಆಗಸ್ಟ್ ತಿಂಗಳವರೆಗೂ ಎಲ್ಲಾ ಕಂತುಗಳನ್ನು ಪಾವತಿಸಲಾಗಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಮೊದಲು ಉತ್ತರಿಸಿದ್ದರು. ಆದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತು ಪಾವತಿಯಾಗಿಲ್ಲ ಎಂದು ಬಿಜೆಪಿ ನಾಯಕರು ದಾಖಲೆ ಸಹಿತ ಸಾಬೀತು ಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟುಹಿಡಿದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದರಿಂದ ಆಡಳಿತ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ವಿರೋಧ ಪಕ್ಷಗಳ ಶಾಸಕರು ಧರಣಿ ಆರಂಭಿಸಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕೆಲಕಾಲ ಸದನದ ಕಲಾಪಗಳನ್ನು ಮುಂದೂಡಿದರು.
ಬೆಳಗ್ಗೆ ನಿಗದಿತ ಸಮಯಕ್ಕಿಂತ ಸುಮಾರು ಒಂದೂವರೆ ಗಂಟೆ ತಡವಾಗಿ ಸದನ ಆರಂಭವಾದಾಗ, ಬಿಜೆಪಿ ಶಾಸಕರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ತಡವಾಗಿ ಆರಂಭವಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಳೆದ ಮೂರು ದಿನಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಸದನದಲ್ಲಿ ಕಾಣುತ್ತಿಲ್ಲ. ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ಪಾವತಿ ಮಾಡಿರುವ ವಿಚಾರದಲ್ಲಿ ಸದನದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಈ ವಿಚಾರವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ನೋಟೀಸ್ ನೀಡಲಾಗಿತ್ತು. ಮೂರು ದಿನಗಳಿಂದ ಚರ್ಚೆಯಾಗುತ್ತಿದೆ. ಅವರು ಸದನದಲ್ಲಿ ಕಾಣುತ್ತಿಲ್ಲ. ಅವರು ಚಂದ್ರಲೋಕದಲ್ಲಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು ಉತ್ತರ ನೀಡುವಾಗ ನಾವು ಸ್ಪಷ್ಟನೆ ಕೇಳಿದಾಗಲೂ, 2025ರ ಆಗಸ್ಟ್ ತಿಂಗಳವರೆಗೂ ಗೃಹಲಕ್ಷ್ಮೀ ಹಣ ಪಾವತಿಯಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಕೊಟ್ಟಿದ್ದೇವೆ, ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಅಧಿಕಾರಿಗಳ ಬಳಿ ಸರಿಯಾದ ಮಾಹಿತಿ ಪಡೆದು ಸಚಿವರು ಸೂಕ್ತ ಉತ್ತರ ಕೊಡಬೇಕಲ್ಲವೇ? ಸಚಿವರು ನೀಡುವ ಉತ್ತರವನ್ನು ಸತ್ಯವೆಂದೇ ಭಾವಿಸುತ್ತೇವೆ. ಮಂತ್ರಿಗಳು ಹೇಳುವುದೇ ಸುಳ್ಳು ಎಂದಾದರೆ ಜನರು ಈ ಸದನದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಸದನದಲ್ಲಿ ನೀಡುವ ಹೇಳಿಕೆಗಳಿಗೆ ಮಾನ್ಯತೆ ಇಲ್ಲವಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯಾಗಿ ಬಿಜೆಪಿ ಸದಸ್ಯರಾದ ಡಾ.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಪ್ರಭು ಚವ್ಹಾಣ್, ಸುನೀಲ್‌ಕುಮಾರ್ ಮೊದಲಾದವರು ಆಕ್ಷೇಪಿಸಿ ಮಾತನಾಡಲು ಮುಂದಾದಾಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜವಾಬ್ದಾರಿ ನಮದೂ ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರು ಸದನಕ್ಕೆ ಉತ್ತರ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ಬಂದಾಗ ಅವರೂ ಸ್ಪಷ್ಟನೆ ನೀಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಪಾವತಿಯಾಗದಿದ್ದರೆ ಆ ಹಣವನ್ನು ಫಲಾನುಭವಿಗಳಿಗೆ ಪಾವತಿಸುವ ಭರವಸೆಯನ್ನು ನೀಡಿದ್ದಾರೆ. ಸದನವನ್ನು ತಪ್ಪು ದಾರಿಗೆ ಎಳೆಯುವ ಯಾವ ಉದ್ದೇಶವೂ ಸಚಿವರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸಂಬಂಧಪಟ್ಟ ಸಚಿವರು ಸದನಕ್ಕೆ ಆಗಮಿಸಬೇಕು, ನೇರವಾಗಿ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.
ಸದಸ್ಯ ಎಸ್.ಸುರೇಶ್‌ಕುಮಾರ್, ಸುಳ್ಳು ಹೇಳುವ ಉದ್ದೇಶ ಸಚಿವರಿಗಿಲ್ಲ ಎಂದು ಪ್ರಿಯಾಂಕ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಗೃಹಲಕ್ಷ್ಮಿ ಹಣವನ್ನು ಚುನಾವಣೆಯ ಹಿಂದಿನ ದಿನ ಫಲಾನುಭವಿಗಳಿಗೆ ಖಾತೆಗೆ ಜಮೆ ಮಾಡುತ್ತಾರೆ. ಅದೇ ರೀತಿ ಅಧಿವೇಶನದ ಕೊನೆಯ ದಿನ ಉತ್ತರ ಕೊಡುತ್ತಾರೆ. ಫಲಾನುಭವಿಗಳಿಗೆ ಗೃಹಲಕ್ಷ್ಮಿಯ ಹಣವೂ ಬರುವುದಿಲ್ಲ. ಸದನದಲ್ಲಿ ನಮಗೆ ಉತ್ತರವೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆಂದು ಆಕ್ಷೇಪ ವ್ಯಕ್ತ ಪಡಿಸಲಾಗುತ್ತಿದೆ. ಸಂಬಂಧಪಟ್ಟ ಸಚಿವರನ್ನು ಕರೆದು ಮಾತನಾಡಿ, ಸೂಕ್ತ ಉತ್ತರ ಕೊಡಿಸುವುದಾಗಿ ಭರವಸೆ ನೀಡಿ, ಪ್ರಶ್ನೋತ್ತರ ಕಲಾಪ ನಡೆಸಲು ಸಹಕರಿಸಿ ಎಂದರು.
ಬಿಜೆಪಿ ಸದಸ್ಯ ಸುನೀಲ್‌ಕುಮಾರ್, ಇದೇ ವಿಚಾರ ಮೂರು ದಿನದಿಂದ ಚರ್ಚೆಯಾಗುತ್ತಿದೆ. ಇದು ಕೇವಲ ಹಣದ ವಿಚಾರವಲ್ಲ. ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಆ ರೀತಿ ತಪ್ಪು ಮಾಹಿತಿ ಕೊಟ್ಟವರನ್ನು ಕರೆಸಿ ಸ್ಪಷ್ಟಪಡಿಸಿದ ನಂತರವೇ ಸದನ ನಡೆಸಿ. ಅಲ್ಲಿಯವರೆಗೂ ನಾವು ಪ್ರಶ್ನೋತ್ತರ ನಡೆಯಲು ಸಹಕರಿಸುವುದಿಲ್ಲ? ಸಚಿವರು ಮೂರು ದಿನದಿಂದ ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದರು.
ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್, ಸಚಿವರು ಬೇಕಾದ ರೀತಿ ಉತ್ತರ ನೀಡುತ್ತಾರೆ ಎಂದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.
ಮತ್ತೆ ಅಶೋಕ್, ಈ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕಗಳ ಮಂಡನೆ, ಚರ್ಚೆ, ಅನುಮೋದನೆಗೆ ಸಹಕರಿಸಿದ್ದೇವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಪಾವತಿಯಾಗದಿದ್ದರೆ ಕೊಡಿಸುವುದಾಗಿ ಹೇಳಿದ್ದಾರೆ. ಅದಕ್ಕೂ ಮೊದಲು ಸಚಿವರು ಸದನಕ್ಕೆ ತಪ್ಪು ಉತ್ತರ ನೀಡುವ ಮೂಲಕ ಅಗೌರವ ತೋರಿದ್ದಾರೆ. 1.20 ಕೋಟಿ ಜನರಿಗೆ ಸಂಬಂಧಿಸಿದ ವಿಚಾರವಿದು. ಅವರ ಖಾತೆಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಪಾವತಿಯಾಗಿಲ್ಲ. ಎರಡು ತಿಂಗಳು ಬಿಟ್ಟು ಮುಂದಿನ ತಿಂಗಳ ಹಣವನ್ನು ಕೊಟ್ಟಿರುವುದು ಇತಿಹಾಸದಲ್ಲಿ ನಡೆದಿಲ್ಲ. ಮೋಸ ಮಾಡಲು ಈ ರೀತಿ ಮಾಡಿದ್ದಾರೆಯೇ? ಆ ಹಣ ಸ್ವಂತಕ್ಕೆ ಬಳಸಿದ್ದಾರೆಯೇ? ಪಕ್ಷಕ್ಕೆ ಕೊಟ್ಟಿದ್ದಾರೆಯೇ? ಅಥವಾ ಖಜಾನೆ ಖಾಲಿಯಾಗಿದೆಯೇ? ಎಂದು ಅವರು ಪ್ರಶ್ನಿಸಿದರು.
ಆಗ ಕೃಷಿ ಸಚಿವ ಚಲುವರಾಯಸ್ವಾಮಿ ಆಕ್ಷೇಪವೆತ್ತಿದಾಗ, ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸದನ ಗೊಂದಲ, ಗದ್ದಲದ ಗೂಡಾಯಿತು.
ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪಕ್ಕೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಂತೆ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಸಭಾಧ್ಯಕ್ಷರು ಸದನದ ಕಲಾಪವನ್ನು ಕೆಲಕಾಲ ಮುಂದೂಡಿದರು.
ಮತ್ತೆ ಸದನ ಸಮಾವೇಶಗೊಂಡಾಗಲು ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರೆಸಿದರು. ಆರ್.ಅಶೋಕ್, ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು ಮತ್ತು ತಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಭಾಧ್ಯಕ್ಷರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಆಗಮಿಸಿದ್ದಾರೆ. ಈ ಮೊದಲು ನೀಡಿದ್ದ ಉತ್ತರಕ್ಕೆ ಸ್ಪಷ್ಟನೆ ನೀಡಲಿದ್ದಾರೆ. ವಿರೋಧ ಪಕ್ಷಗಳ ಸದಸ್ಯರು ಧರಣಿ ಕೈ ಬಿಟ್ಟು ತವ್ಮ ಸ್ಥಾನಕ್ಕೆ ಮರಳಬೇಕು. ಇದನ್ನು ದೊಡ್ಡ ವಿಚಾರ ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಆದರೆ ಧರಣಿ ಹಿಂಪಡೆಯಲು ಒಪ್ಪದ ವಿರೋಧ ಪಕ್ಷಗಳ ಸದಸ್ಯರು. ಸಚಿವರು ಮೊದಲು ಉತ್ತರ ನೀಡಲಿ. ಧರಣಿ ನಡೆಯುವಾಗಲೇ ಹಲವಾರು ಭಾರಿ ವಿಧೇಯಕಗಳ ಮಂಡನೆಯಾಗಿದೆ, ಪ್ರಶ್ನೋತ್ತರವೂ ನಡೆದಿದೆ. ಹಾಗಾಗಿ ಸಚಿವರು ಮೊದಲು ಉತ್ತರ ನೀಡಲಿ ಎಂದು ಆರ್.ಅಶೋಕ್ ಪಟ್ಟು ಹಿಡಿದರು. ಸದನ ಕ್ರಮ ಬದ್ಧವಾಗಿಲ್ಲದ ವೇಳೆ ಸಚಿವರು ಉತ್ತರ ನೀಡುವುದು ಸೂಕ್ತವಲ್ಲ ಎಂದು ಸಭಾಧ್ಯಕ್ಷರು ಹೇಳಿದರು.
ಮನವಿಗೆ ಸ್ಪಂದಿಸಿದ ಆರ್.ಅಶೋಕ್, ನಾವು ಧರಣಿಯನ್ನು ಹಿಂಪಡೆಯುತ್ತೇವೆ. ಸಚಿವರ ಉತ್ತರದಿಂದ ತೃಪ್ತವಾಗದಿದ್ದರೆ ಮತ್ತೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೊನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದಾಗ ಸುದೀರ್ಘ ಚರ್ಚೆ ನಡೆಯಿತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


