ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ದಶಕಗಳ ಕಾಲದ ಹಳೆಯ ನಿಯಮಗಳಿಗೆ ಇತಿಶ್ರೀ ಹಾಡುವ ‘ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ 2025’ಕ್ಕೆ ಮಂಗಳವಾರ ಅಧಿಕೃತವಾಗಿ ಅನುಮೋದನೆ ನೀಡಲಾಯಿತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಿಸಿದ ಈ ಐತಿಹಾಸಿಕ ವಿಧೇಯಕವು ರಾಜ್ಯದ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಕಾನೂನು ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆ ತರಲಿದೆ.
ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ಮೂಡಿಸುವುದು ಹಾಗೂ ಬಾಡಿಗೆ ಸಂಬಂಧಿತ ವ್ಯಾಜ್ಯಗಳಿಂದ ನ್ಯಾಯಾಲಯಗಳ ಮೇಲಿರುವ ಪ್ರಕರಣಗಳ ಹೊರೆಯನ್ನು ಗಣನೀಯವಾಗಿ ತಗ್ಗಿಸುವುದು ಈ ಹೊಸ ಕಾನೂನಿನ ಮುಖ್ಯ ಉದ್ದೇಶವಾಗಿದೆ.ಈ ತಿದ್ದುಪಡಿಯ ಮೂಲಕ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ದೈನಂದಿನ ಕಿರಿಕಿರಿಗಳಿಗೆ ಬ್ರೇಕ್ ಬೀಳಲಿದ್ದು, ಉಭಯರಿಗೂ ನ್ಯಾಯಸಮ್ಮತವಾದ ರಕ್ಷಣೆ ಸಿಗುವ ನಿರೀಕ್ಷೆಯಿದೆ.
ಹಳೆಯ ಕಾನೂನಿನಲ್ಲಿ ಸಣ್ಣಪುಟ್ಟ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಆದರೆ ಹೊಸ ತಿದ್ದುಪಡಿಯಂತೆ ಇನ್ಮುಂದೆ ಯಾರೂ ಜೈಲಿಗೆ ಹೋಗಬೇಕಿಲ್ಲ. ಬದಲಾಗಿ, ತಪ್ಪು ಮಾಡಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ದಂಡದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ.
ಬಾಡಿಗೆದಾರರು ಮತ್ತು ಮಾಲೀಕರು ಗಮನಿಸಬೇಕಾದ ಪ್ರಮುಖ ಅಂಶಗಳು:
ಮಾಲೀಕರ ಅನುಮತಿ ಇಲ್ಲದೆ ಬಾಡಿಗೆದಾರರು ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದರೆ, ಈ ಮೊದಲು ಕೇವಲ ₹5,000 ದಂಡವಿತ್ತು. ಈಗ ಇದನ್ನು ₹50,000 ಕ್ಕೆ ಏರಿಸಲಾಗಿದೆ!
ಮಾಲೀಕರು ಬಾಡಿಗೆದಾರರನ್ನು ಮನಬಂದಂತೆ ಖಾಲಿ ಮಾಡಿಸುವಂತಿಲ್ಲ. ಮನೆ ಖಾಲಿ ಮಾಡಿಸಲು ಕನಿಷ್ಠ 3 ತಿಂಗಳು ಮುಂಚಿತವಾಗಿ ನೋಟಿಸ್ ನೀಡುವುದು ಈಗ ಕಡ್ಡಾಯ.
ಇನ್ಮುಂದೆ ಎಲ್ಲಾ ಬಾಡಿಗೆ ಒಪ್ಪಂದಗಳನ್ನು ಸರ್ಕಾರಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸುವುದು ಕಡ್ಡಾಯವಾಗಿದೆ. ಇದರಿಂದ ಪಾರದರ್ಶಕತೆ ಬರಲಿದೆ.
ಬಾಡಿಗೆ ವಿಚಾರವಾಗಿ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಗಲಾಟೆಯಾದರೆ, ಅದನ್ನು ಬೇಗನೆ ಬಗೆಹರಿಸಲು ‘ಫಾಸ್ಟ್ ಟ್ರ್ಯಾಕ್’ ವ್ಯವಸ್ಥೆ ಜಾರಿಗೆ ಬರಲಿದೆ.
ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬ್ರೋಕರ್‌ಗಳಿಗೆ ಈ ಕಾಯ್ದೆ ಸಿಂಹಸ್ವಪ್ನವಾಗಲಿದೆ. ಸೆಕ್ಷನ್ 20ರ ಅಡಿಯಲ್ಲಿ ನೋಂದಣಿ ಮಾಡಿಸದ ಬ್ರೋಕರ್‌ಗಳಿಗೆ ದಿನಕ್ಕೆ ₹25,000 ದಂಡ ವಿಧಿಸಲಾಗುತ್ತದೆ. ಈ ಮೊದಲು ಇದು ಕೇವಲ ₹2,000 ಇತ್ತು. ಪದೇ ಪದೇ ತಪ್ಪು ಮಾಡಿದರೆ ದಂಡದ ಮೊತ್ತ ಇನ್ನೂ ಹೆಚ್ಚಾಗಲಿದೆ.
ಕೇವಲ ಸಣ್ಣಪುಟ್ಟ ತಪ್ಪುಗಳಿಗಾಗಿ ಜೈಲು ಶಿಕ್ಷೆ ವಿಧಿಸುವುದು ನ್ಯಾಯವಲ್ಲ ಎನ್ನುವ ಆಶಯದೊಂದಿಗೆ ಕೇಂದ್ರ ಸರ್ಕಾರದ ಮಾದರಿ ಕರಡಿನ ಅನ್ವಯ ಈ ತಿದ್ದುಪಡಿ ತರಲಾಗಿದೆ. ಆದರೆ, ಜೈಲು ಶಿಕ್ಷೆ ಇಲ್ಲವೆಂದು ನಿಯಮಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಲಾಗಿದೆ,” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.
LIC ಹೌಸಿಂಗ್ ಫೈನಾನ್ಸ್ ನೇಮಕಾತಿ: ಐಟಿ ವೃತ್ತಿಪರರಿಗೆ ₹19 ಲಕ್ಷದವರೆಗೆ ವೇತನ; ಕೂಡಲೇ ಅರ್ಜಿ ಸಲ್ಲಿಸಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


