ಆಂಧ್ರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳು ಬಲಿಯಾಗಿದ್ದಾರೆ. ಇವರಲ್ಲಿ ದೇಶದಲ್ಲಿ ನಡೆದ 26 ನಕ್ಸಲ್ ದಾಳಿಯ ರೂವಾರಿಯಾಗಿದ್ದ ನಕ್ಸಲ್ ಕಮಾಂಡರ್ ಮಾದ್ವಿ ಹಿದ್ಮಾ ಸೇರಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾದ್ವಿ ಹಿದ್ಮಾ ಎನ್‌ಕೌಂಟರ್ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
43 ವರ್ಷದ ನಕ್ಸಲ್ ಕಮಾಂಡರ್ ಮಾದ್ವಿ ಹಿದ್ಮಾ ವಿವಿಧ ಪ್ರಕರಣದಲ್ಲಿ ದೇಶದ ವಿವಿಧ ರಾಜ್ಯದಲ್ಲಿ ಭದ್ರತಾಪಡೆಗಳಿಗೆ ಬೇಕಾಗಿದ್ದ. ಈತನ ಸುಳಿವು ಕೊಟ್ಟವರಿಗೆ 50 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಲಾಗಿತ್ತು.
ಮಂಗಳವಾರ ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲ್ ಕಮಾಂಡರ್ ಮಾದ್ವಿ ಹಿದ್ಮಾ, ಆತನ ಪತ್ನಿ ಸೇರಿದಂತೆ 6 ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದೆ.
ಮಾದ್ವಿ ಹಿದ್ಮಾ ಯಾರು?; ಭದ್ರತಾ ಪಡೆಗಳು, ನಾಗರೀಕರ ಮೇಲೆ ನಡೆದ 26 ದಾಳಿಗಳನ್ನು ರೂಪಿಸಿದ್ದ ನಕ್ಸಲ್ ಕಮಾಂಡರ್ ಮಾದ್ವಿ ಹಿದ್ಮಾ. 2010ರ ದಾಂತೇವಾಡದ ದಾಳಿ, 2013ರಲ್ಲಿ ಜೀರಾಮ್ ಕಣಿವೆಯಲ್ಲಿ ಕಾಂಗ್ರೆಸ್ ನಾಯಕರ ಬೆಂಗಾವಲು ಪಡೆಯ ಮೇಲಿನ ದಾಳಿ, 2021ರ ಸುಕ್ಮಾ ಜಿಲ್ಲೆಯ ಬಸ್ತಾರ್ ಪ್ರಾಂತ್ಯದ ದಾಳಿಯ ರೂವಾರಿಯಾದ ಮಾದ್ವಿ ಹಿದ್ಮಾ ಮೇಲೆ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದ್ದವು.
ಆಂಧ್ರ ಪ್ರದೇಶ-ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿ ನಕ್ಸಲರ ಸಂಚಾರದ ಕುರಿತು ಗುಪ್ತಚರ ಇಲಾಖೆ ಮಾಹಿತಿಯ ಅನ್ವಯ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಮಾದ್ವಿ ಹಿದ್ಮಾ, ಆತನ 2ನೇ ಪತ್ನಿ ರಾಜೆ (ರಾಜಕ್ಕ) ಸೇರಿದಂತೆ 6 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಜಿಲ್ಲಾ ಎಸ್ಪಿ ಅಮಿತ್ ಬಾರ್ದಾರ್ ಎನ್‌ಕೌಂಟರ್ ಕುರಿತು ಮಾತನಾಡಿದ್ದು, “ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳಾ ನಕ್ಸಲರು ಇಂದಿನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ. ಮಾದ್ವಿ ಹಿದ್ಮಾ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಬೇಕು ಎಂದು ಆತನ ತಾಯಿ ಒಂದು ವಾರದ ಹಿಂದೆ ಬಹಿರಂಗವಾಗಿ ಮನವಿ ಮಾಡಿದ್ದರು.
ಸುಕ್ಮಾದಲ್ಲಿ ಛತ್ತೀಸ್‌ಗಢ ಸಿಎಂ ವಿಜಯ್ ಶರ್ಮಾ ಭೇಟಿಯ ಬಳಿಕ ಮಾದ್ವಿ ಹಿದ್ಮಾ ತಾಯಿ ಮಾದ್ವಿ ಪುಂಜಿ, ಭದ್ರತಾ ಪಡೆಗಳಿಗೆ ಶರಣಾಗುವಂತೆ, ಅವರ ಪುನರ್ವಸತಿ ಪ್ಯಾಕೇಜ್ ಒಪ್ಪಿಕೊಳ್ಳುವಂತೆ ಬಹಿರಂಗವಾಗಿ ಮಾದ್ವಿ ಹಿದ್ಮಾಗೆ ಮನವಿ ಮಾಡಿದ್ದಳು.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 1981ರಲ್ಲಿ ಜನಿಸಿದ ಮಾದ್ವಿ ಹಿದ್ಮಾ ಪೀಪಲ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ ನಂಬರ್-1 ಮುಖ್ಯಸ್ಥನಾಗಿದ್ದ. ಅಲ್ಲದೇ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಯುವ ಸದಸ್ಯ. ಬಸ್ತಾರ್ ಆದಿವಾಸಿ ಕಡೆಯಿಂದ ಕೇಂದ್ರ ಸಮಿತಿ ಸೇರಿದ್ದ ಏಕೈಕ ವ್ಯಕ್ತಿಯಾಗಿದ್ದ.
2021ರಲ್ಲಿ ಸುಕ್ಮಾ-ಬಿಜಾಪುರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾದ್ವಿ ಹಿದ್ಮಾ ಪ್ರಮುಖ ಪಾತ್ರವಹಿಸಿದ್ದ. 22 ಭದ್ರತಾ ಸಿಬ್ಬಂದಿ ಈ ದಾಳಿಯಲ್ಲಿ ಹುತಾತ್ಮರಾಗಿದ್ದರು. ಮಾದ್ವಿ ಹಿದ್ಮಾ ಗೆರಿಲ್ಲಾ ತಂತ್ರಗಳು ಚಿಕ್ಕವಯಸ್ಸಿನಲ್ಲಿಯೇ ಆತನನ್ನು ನಕ್ಸಲ್ ಕಮಾಂಡರ್ ಆಗಿ ಮಾಡಿತ್ತು.
ಮಾದ್ವಿ ಹಿದ್ಮಾ 10ನೇ ತರಗತಿ ತನಕ ವ್ಯಾಸಂಗ ಮಾಡಿದ್ದ ಹಿಂದುಳಿದ ಪ್ರದೇಶವಾಗಿದ್ದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಜನರಿಗಾಗಿ ಕೆರೆಗಳನ್ನು ನಿರ್ಮಾಣ ಮಾಡುವುದನ್ನು ನೋಡಿದ್ದ ಆತ, ಅದರಿಂದ ಪ್ರೇರಿತಗೊಂಡು ನಕ್ಸಲ್ ಪಡೆಗೆ ಸೇರಿಕೊಂಡಿದ್ದ.
ನಕ್ಸಲ್ ಚಳವಳಿ ಮಾಜಿ ನಾಯಕಿ ಸುಂದರಿ ಪ್ರಕಾರ ಮಾದ್ವಿ ಹಿದ್ಮಾ ಪ್ರತಿದಿನ 4 ಗಂಟೆಗೆ ಏಳುತ್ತಿದ್ದ. ದೇಶ, ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಬೆಳವಣಿಗೆ ಕುರಿತು ಆತ ಮಾಹಿತಿಯನ್ನು ಹೊಂದಿರುತ್ತಿದ್ದ. ತಮ್ಮ ತಂಡದಲ್ಲಿರುವ ಸದಸ್ಯರು ದೈಹಿಕವಾಗಿ ಸಮರ್ಥರಾಗಿರಬೇಕು ಎಂದು ಕಠಿಣ ತರಬೇತಿಯನ್ನು ಸಹ ನೀಡುತ್ತಿದ್ದ.
ಮಾದ್ವಿ ಹಿದ್ಮಾ ಕುಡಿತ, ಸಿಗರೇಟ್ ಸೇರಿದಂತೆ ಯಾವುದೆ ಚಟವನ್ನು ಹೊಂದಿರಲಿಲ್ಲ. ಬೀಫ್ ಇಷ್ಟಪಡುತ್ತಿದ್ದ. ಚಿಕನ್ ಮತ್ತು ಟೀ ಎಂದರೆ ಅಚ್ಚುಮೆಚ್ಚಾಗಿತ್ತು. ಆತನ ಬಗ್ಗೆ ತಂಡದಲ್ಲಿ ಎಲ್ಲರೂ ಅಪಾರ ಗೌರವ ಹೊಂದಿದ್ದರು. ಆತನ ತಂತ್ರಗಳು, ಚಿಕ್ಕವಯಸ್ಸಿನಲ್ಲೇ ಕಮಾಂಡರ್ ಆಗಿ ಬೆಳೆದ ರೀತಿ ತಂಡದ ಇತರ ಸದಸ್ಯರಿಗೆ ಪ್ರೇರಣೆಯಾಗಿತ್ತು.
ಭದ್ರತಾ ಪಡೆಗಳ ಉನ್ನತ ಮೂಲಗಳ ಮಾಹಿತಿ ಪ್ರಕಾರ ನಕ್ಸಲ್ ಚಲನವಲನದ ಮೇಲೆ ಕಣ್ಗಾವಲು ವಹಿಸಲಾಗಿತ್ತು ಮತ್ತು ನವೆಂಬರ್ 30ರ ತನಕ ಶರಣಾಗಲು ಮಾದ್ವಿ ಹಿದ್ಮಾಗೆ ಗಡುವು ನೀಡಲಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


