ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಮಾಡಬೇಕು. ಸಾಂಸ್ಕೃತಿಕ ನಗರಿಗೆ ಇನ್ನೂ ಹೆಚ್ಚಿನ ವಿಮಾನ ಸಂಪರ್ಕ ಬೇಕು ಎಂಬುದು ಬಹಳ ಹಿಂದಿನ ಬೇಡಿಕೆ. ಆದರೆ ವಿವಿಧ ಕಾರಣಕ್ಕೆ ವಿಮಾನ ನಿಲ್ದಾಣ ವಿಸ್ತರಣೆ ಕಾರ್ಯ ವಿಳಂಬವಾಗುತ್ತಿತ್ತು. ಈಗ ಈ ಯೋಜನೆಗೆ ಇದ್ದ ಎಲ್ಲಾ ಅಡೆ-ತಡೆ ನಿವಾರಣೆಯಾಗಿವೆ.
ವಿಮಾನ ನಿಲ್ದಾಣ ವಿಸ್ತರಣೆಗೆ ಪ್ರಮುಖ ಅಡ್ಡಿಯಾಗಿದ್ದು ಬೈಪಾಸ್ ರಸ್ತೆ ಯೋಜನೆ. ಈಗ ಅಧಿಕಾರಿಗಳು ಸಮಸ್ಯೆ ನಿವಾರಣೆ ಮಾಡಿದ್ದಾರೆ. ಬೈಪಾಸ್ ರಸ್ತೆಯನ್ನು 9 ರಿಂದ 3 ಕಿ.ಮೀ.ಗೆ ಕಡಿತಗೊಳಿಸಲಿದ್ದು, ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ರಸ್ತಾವನೆ ಅಂತಿಮಗೊಳಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪವೇ ರಾಷ್ಟ್ರೀಯ ಹೆದ್ದಾರಿ 766 ಮೈಸೂರು-ನಂಜನಗೂಡು ರಸ್ತೆ ಸಾಗುತ್ತದೆ. ಈ ಕಾರಣಕ್ಕೆ ದಶಕಗಳಿಂದ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತಡವಾಗುತ್ತಿತ್ತು. ಈಗ ಈ ಯೋಜನೆ ಜಾರಿಗೊಳಿಸಲು ತಯಾರಿ ನಡೆದಿದೆ.
ಯೋಜನೆಯ ವಿವರ: ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಯೋಜನೆ ಕುರಿತು ವಿವರಣೆ ನೀಡಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ಸಮೀಪ ಬೈಪಾಸ್ ರಸ್ತೆ ಯೋಜನೆಯನ್ನು ಪರಿಷ್ಕರಣೆ ಮಾಡಲಾಗಿದೆ. ರನ್ ವೇ ವಿಸ್ತರಣೆ ಯೋಜನೆಗೆ ಅನುಕೂಲವಾಗುವಂತೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಹ ಒಪ್ಪಿಗೆ ನೀಡಿದೆ. 9 ಕಿ.ಮೀ. ಅಂಡರ್ ಪಾಸ್ ಬದಲು 3 ಕಿ.ಮೀ. ನಿರ್ಮಾಣ ಮಾಡುವುದರಿಂದ ಯೋಜನಾ ವೆಚ್ಚ, ಭೂ ಸ್ವಾಧೀನದ ಪ್ರಮಾಣ ಎಲ್ಲವೂ ಕಡಿಮೆಯಾಗಲಿದೆ.
ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗೆ ಕರ್ನಾಟಕ ಸರ್ಕಾರ ಭೂಮಿಯನ್ನು ಹಸ್ತಾಂತರ ಮಾಡಬೇಕಿದೆ. 240 ಎಕರೆ ಭೂಮಿಯನ್ನು ಈಗಾಗಲೇ ರಾಜ್ಯ ಸರ್ಕಾರ ಹಸ್ತಾಂತರ ಮಾಡಿದೆ. 80 ಎಕರೆ ಭೂಮಿಯನ್ನು ಕೆಲವೇ ದಿನಗಳಲ್ಲಿ ಎಎಐಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ವಿಶ್ವದಲ್ಲೇ ತನ್ನದೇ ಆದ ಛಾಪು ಮೂಡಿಸಿದೆ. ಆದರೆ ವಿಮಾನ ಸಂಪರ್ಕದ ವಿಚಾರಕ್ಕೆ ಬಂದರೆ ಮೈಸೂರು ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಈಗ ಹಲವು ಪ್ರವಾಸಿಗರು ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಬಸ್, ಖಾಸಗಿ ವಾಹನದಲ್ಲಿ ಮೈಸೂರಿಗೆ ಆಗಮಿಸಬೇಕಿದೆ.
ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು, 700 ಕೋಟಿ ರೂ. ಅನುದಾನವನ್ನು ನೀಡಲು ಅನುಮೋದನೆ ನೀಡಿದೆ. ಸದ್ಯ ಇರುವುದು 1,740 ಮೀಟರ್ ರನ್ ವೇ, ಅದನ್ನು 2,750 ಮೀಟರ್‌ಗೆ ವಿಸ್ತರಣೆ ಮಾಡುವುವು ಪ್ರಸ್ತಾವಿತ ಯೋಜನೆಯಾಗಿದೆ.
ಆದರೆ ವಿಮಾನ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿ ಇರುವುದು ಯೋಜನೆಗೆ ಅಡ್ಡಿ ಉಂಟು ಮಾಡಿತ್ತು. ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿ, ಅದರ ಮೇಲೆ ರನ್ ವೇ ವಿಸ್ತರಣೆ ಮಾಡುವ ಯೋಜನೆ ತಯಾರು ಮಾಡಲಾಗಿದೆ.
ರನ್ ವೇ ವಿಸ್ತರಣೆಯಾದರೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ದೊಡ್ಡ ದೊಡ್ಡ ವಿಮಾನಗಳು ಆಗಮಿಸಬಹುದು. ಆಗ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ರನ್ ವೇ ವಿಸ್ತರಣೆ ಕಾರ್ಯ ಕೈಗೊಳ್ಳಲು ಈಗಾಗಲೇ ಸಿವಿಲ್ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ಡಿಪಿಆರ್ ತಯಾರಾಗಿದೆ. ರಾಜ್ಯ ಸರ್ಕಾರ ಭೂಮಿಯನ್ನು ಒದಗಿಸಲಿದೆ. ಏಕಕಾಲಕ್ಕೆ 1,500 ಪ್ರಯಾಣಿಕರು ಬಂದರೂ ಸಹ ಯಾವುದೇ ಸಮಸ್ಯೆ ಉಂಟಾಗದಂತೆ ಬೃಹತ್ ಟರ್ಮಿನಲ್ ನಿರ್ಮಾಣ, ಕಾರ್ಗೋ ಕಾಂಪ್ಲೆಕ್ಸ್ ನಿರ್ಮಾಣ, ಟ್ಯಾಕ್ಸಿ ಬೇ ಮತ್ತು ರನ್ ವೇ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


