ದೆಹಲಿ ಕೆಂಪು ಕೋಟೆ ಸಮೀಪ ನಡೆದ ಐ-20 ಕಾರು ಸ್ಪೋಟದ ರೂವಾರಿ ಡಾ.ಉಮರ್ ಉನ್ ನಬಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದೆ. ಸ್ಪೋಟ ನಡೆದು ಒಂದು ವಾರದ ಬಳಿಕ ಬಾಂಬರ್ ಮಾತನಾಡಿರುವ ವಿಡಿಯೋ ಬಹಿರಂಗವಾಗಿದೆ.
ಎನ್‌ಐಎ ದೆಹಲಿ ಸ್ಪೋಟ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. ಇಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಆತ್ಮಾಹುತಿ ದಾಳಿ ಬಗ್ಗೆ ಡಾ.ಉಮರ್ ಉನ್ ನಬಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಡಾ. ನಬಿ ಒಬ್ಬನೇ ಕುಳಿತು ವಿಡಿಯೋ ಮುಂದೆ ಮಾತನಾಡಿದ್ದಾನೆ. ಇಂಗ್ಲೀಶ್‌ನಲ್ಲಿ ಮಾತನಾಡಿರುವ ಆತ ಆತ್ಮಾಹುತಿ ದಾಳಿಯನ್ನು ಸಮರ್ಥಿಸಿಕೊಂಡಿದ್ದಾನೆ. ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಣ ಮಾಡಲಾಗಿದೆ?. ಸ್ಪೋಟ ನಡೆದ ದಿನವೇ ವಿಡಿಯೋ ಮಾಡಲಾಗಿದೆಯೇ? ಎಂಬುದು ಇನ್ನೂ ತಿಳಿದುಬರಬೇಕಿದೆ.
ಡಾ. ನಬಿ ವಿಡಿಯೋದಲ್ಲಿ ಆತ್ಮಾಹುತಿ ದಾಳಿಯನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಜನರು ಮಾಡುವ ದೊಡ್ಡ ತಪ್ಪು ಇದೇ ಆಗಿದೆ. ಆತ್ಮಾಹುತಿ ದಾಳಿಯ ಕಲ್ಪನೆ ನಿಜವಾಗಿಯೂ ಏನೆಂದು ಅರ್ಥಮಾಡಿಕೊಳ್ಳಲು ವಿಫಲವಾಗುವುದು ಎಂದು ವಿವರಣೆ ನೀಡಿದ್ದಾನೆ. ಒಂದು ನಿಮಿಷ 21 ಸೆಕೆಂಡ್‌ಗಳ ವಿಡಿಯೋ ಇದಾಗಿದೆ.
ದೆಹಲಿ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟಿರುವುದು ಡಾ. ಉಮರ್ ಉನ್ ನಬಿ ಎಂದು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಖಚಿತಪಡಿಸಿದೆ. ಈತ ಮೂಲತಃ ಪುಲ್ವಾಮಾದ ಕೊಯಿಲ್ ಗ್ರಾಮದವನು. ಅಕ್ಟೋಬರ್ 30ರಂದು ಫರಿದಾಬಾದ್ ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ತನ್ನ ಕೆಲಸಕ್ಕೆ ಈಗ ರಾಜೀನಾಮೆ ನೀಡಿದ್ದ.
ವಿಡಿಯೋದಲ್ಲಿ ಹೇಳಿದ್ದೇನು?
ಡಾ. ಉಮರ್ ಉನ್ ನಬಿ ಫರಿದಾಬಾದ್‌ನಿಂದ ದೆಹಲಿಗೆ ಆಗಮಿಸಿದ್ದ. ಮತ್ತೊಬ್ಬ ಆರೋಪಿಯ ಜೊತೆ ಸೇರಿ ಎರಡು ಕಾರು ಖರೀದಿ ಮಾಡಿದ್ದ. ಒಂದು ಐ-20 ಕಾರು ಸ್ಪೋಟಗೊಂಡಿದೆ. ಇನ್ನೊಂದು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಾ. ಉಮರ್ ಉನ್ ನಬಿ ದೆಹಲಿಗೆ ಆಗಮಿಸಿದ ಬಳಿಕ ರಾಮ್ ಲೀಲಾ ಮೈದಾನ ಮತ್ತು ಸುನ್ಹೇರಿ ಮಸೀದಿ ಬಳಿ ಸಂಚಾರ ನಡೆಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಈಗಾಗಲೇ ಬಹಿರಂಗವಾಗಿದೆ.
ನವೆಂಬರ್ 9ರಂದು ಫರಿದಾಬಾದ್‌ನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಘಟನೆ ಬಳಿಕ ಡಾ. ಉಮರ್ ಉನ್ ನಬಿ ನಾಪತ್ತೆಯಾಗಿದ್ದ. ನವೆಂಬರ್ 10ರಂದು ಸಂಜೆ ದೆಹಲಿಯಲ್ಲಿ ಆತ್ಮಾಹುತಿ ದಾಳಿಯನ್ನು ಡಾ. ಉಮರ್ ಉನ್ ನಬಿ ನಡೆಸಿದ್ದ. ಈ ಘಟನೆಯಲ್ಲಿ ಇದುವರೆಗೂ 13 ಜನರು ಸಾವನ್ನಪ್ಪಿದ್ದಾರೆ.
ದೆಹಲಿ ಕಾರು ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿರುವ ಎನ್‌ಐಎ ಮಂಗಳವಾರ ಹರ್ಯಾಣದ ಫರಿದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿಯನ್ನು ನಡೆಸಿದೆ. ಸ್ಥಳೀಯ ಪೊಲೀಸರ ಸಹಕಾರದಿಂದ ದಾಳಿಯನ್ನು ನಡೆಸಲಾಗಿದ್ದು, ವಿವಿ ಸುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಸೋಮವಾರ ಕಾಶ್ಮೀರ ಮೂಲದ ಜಾಸೀರ್ ಬಿಲಾಲ್ ವಾನಿಯನ್ನು ಬಂಧಿಸಿದೆ. ಶ್ರೀನಗರಲ್ಲಿ ಈತನನ್ನು ಬಂಧಿಸಲಾಗಿದ್ದು, ಸ್ಪೋಟ ಪ್ರಕರಣಕ್ಕೆ ತಾಂತ್ರಿಕ ನೆರವನ್ನು ಈಗ ನೀಡಿದ್ದ ಎಂಬುದು ಆರೋಪವಾಗಿದೆ.
ಅನಂತ್‌ನಾಗ್ ಜಿಲ್ಲೆಯ ನಿವಾಸಿಯಾದ ಬಿಲಾಲ್ ಸ್ಪೋಟ ಪ್ರಕರಣದ ಷಡ್ಯಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ. ಉಮರ್ ಉನ್ ನಬಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಎನ್‌ಐಎ ಹೇಳಿದೆ. ಸ್ಪೋಟದ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ನಡೆಸಲಾಗುತ್ತಿದೆ.
ಈ ಸ್ಪೋಟ ಪ್ರಕರಣದ ತನಿಖೆಗಾಗಿಯೇ ಎನ್ಐಎ 10 ಜನರ ವಿಶೇಷ ತಂಡವನ್ನು ರಚನೆ ಮಾಡಿದೆ. ವಿವಿಧ ರಾಜ್ಯಗಳ ಪೊಲೀಸರು, ತನಿಖಾ ಸಂಸ್ಥೆಗಳ ಜೊತೆ ಸೇರಿ ತನಿಖೆಯನ್ನು ಎನ್ಐಎ ನಡೆಸುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


