ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿಯ ಆತಂಕದಲ್ಲಿದ್ದ ಜನರಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಅಲ್ಲಿಯವರೆಗೆ ಯಾವುದೇ ಕಾರ್ಡ್‌ಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಪಡಿತರ ಚೀಟಿಗಳ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಆದಾಯ ಮಿತಿ ಯಾಕೆ ಬದಲಾಗಬೇಕು?
ಸಚಿವರ ಪ್ರಕಾರ, ಪ್ರಸ್ತುತ ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‌ದಾರರ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಗೆ ನಿಗದಿಪಡಿಸಿದೆ. ಆದರೆ, ಇಂದಿನ ಕಾಲದಲ್ಲಿ ಸಾಮಾನ್ಯ ಕೂಲಿ ಕಾರ್ಮಿಕನಿಗೂ ದಿನಕ್ಕೆ ಕನಿಷ್ಠ 500 ರೂ. ಕೂಲಿ ಸಿಗುತ್ತದೆ. ಇದರ ಲೆಕ್ಕಾಚಾರ ಹಾಕಿದರೆ ಒಬ್ಬ ಕೂಲಿ ಕಾರ್ಮಿಕನ ವಾರ್ಷಿಕ ಆದಾಯವೇ 1.80 ಲಕ್ಷ ರೂ. ದಾಟುತ್ತದೆ. ಹೀಗಿರುವಾಗ ಬಡವರಿಗೂ ಕಾರ್ಡ್ ಸಿಗದಂತಾಗುತ್ತದೆ ಎಂಬ ಕಾರಣಕ್ಕೆ ಆದಾಯ ಮಿತಿ ಏರಿಸಲು ಸರ್ಕಾರ ಮುಂದಾಗಿದೆ.
ರದ್ದಾದ ಕಾರ್ಡ್ ಮತ್ತೆ ಪಡೆಯುವುದು ಹೇಗೆ?
ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರೊಬ್ಬರು ನೌಕರಿಗೆ ಸೇರಿದ ಕಾರಣಕ್ಕೆ ಅಥವಾ ಅವರ ಆದಾಯ ಹೆಚ್ಚಿದೆ ಎಂಬ ಕಾರಣಕ್ಕೆ ಕಾರ್ಡ್ ರದ್ದಾಗಿದ್ದರೆ, ಆದರೆ ಆ ಸದಸ್ಯರು ನಿಮ್ಮೊಂದಿಗೆ ವಾಸವಾಗಿಲ್ಲದಿದ್ದರೆ ನೀವು ಅದನ್ನು ಮರಳಿ ಪಡೆಯಬಹುದು
ನೌಕರಿಗೆ ಸೇರಿದ ಸದಸ್ಯರು ನಿಮ್ಮೊಂದಿಗೆ ವಾಸವಾಗಿಲ್ಲ ಎಂದು ತಿಳಿಸಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ನಿಮಗೆ ಪುನಃ ಬಿಪಿಎಲ್ ಕಾರ್ಡ್ ನೀಡಲಾಗುವುದು.
ಸದ್ಯಕ್ಕೆ ವೈದ್ಯಕೀಯ ತುರ್ತು ಚಿಕಿತ್ಸೆಯ ಆಧಾರದ ಮೇಲೆ ಮಾತ್ರ ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿದೆ.
ರಾಜ್ಯದಲ್ಲಿ ಶೇ. 73 ರಷ್ಟು ಬಿಪಿಎಲ್ ಕಾರ್ಡ್!
ಸಚಿವರು ಸದನಕ್ಕೆ ನೀಡಿದ ಮಾಹಿತಿಯಂತೆ, ರಾಜ್ಯದ ಜನಸಂಖ್ಯೆಯ ಶೇ. 73 ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಆದರೆ ಕರ್ನಾಟಕವು ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲೇ ಮುಂದಿರುವುದರಿಂದ, ಬಿಪಿಎಲ್ ಕಾರ್ಡ್‌ಗಳ ಪ್ರಮಾಣ ಶೇ. 50ರ ಆಸುಪಾಸಿನಲ್ಲಿ ಇರಬೇಕಿತ್ತು. ಆದರೆ ಅರ್ಹರಿಗಿಂತ ಹೆಚ್ಚಿನವರು ಕಾರ್ಡ್ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಯಾರ ಕಾರ್ಡ್‌ಗಳು ರದ್ದಾಗುತ್ತವೆ?
ಸರ್ಕಾರಿ ನೌಕರರು, ಅನುದಾನಿತ ಸಂಸ್ಥೆಗಳ ನೌಕರರು, ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ. ಕೇಂದ್ರ ಸರ್ಕಾರ ಈಗಾಗಲೇ ರಾಜ್ಯದಲ್ಲಿ 7.75 ಲಕ್ಷ ಶಂಕಾಸ್ಪದ ಫಲಾನುಭವಿಗಳನ್ನು ಗುರುತಿಸಿದೆ.ರಾಜ್ಯದಲ್ಲಿ 4.53 ಲಕ್ಷ ಬಿಪಿಎಲ್ ಹಾಗೂ 1.25 ಲಕ್ಷ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


