ಬೆಂಗಳೂರು: ನಿನ್ನೆ ( ಏಪ್ರಿಲ್ 18 ) ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 4 ವಿಕೆಟ್‌ಗಳ ಗೆಲುವನ್ನು ಕಂಡಿದ್ದು, ತವರಿನಲ್ಲಿ ಆರ್‌ಸಿಬಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ.
ಮಳೆ ಕಾರಣ ಓವರ್ ಕಡಿತಗೊಂಡು ನಡೆದ 14 ಓವರ್‌ಗಳ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಿಮ್ ಡೇವಿಡ್ ಅಜೇಯ ಅರ್ಧಶತಕದ ನೆರವಿನಿಂದ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 96 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಿಲ್ ಸಾಲ್ಟ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬಾರಿಸಿದ ಬೌಂಡರಿ ಮೂಲಕ ಆರಂಭಿಸಿತು. ಆದರೆ ಅದೇ ಓವರ್‌ನ ನಾಲ್ಕನೆ ಎಸೆತದಲ್ಲೇ ಸಾಲ್ಟ್ ವಿಕೆಟ್ ಬಿತ್ತು. ಬಳಿಕ ಆರ್‌ಸಿಬಿ ಆಟಗಾರರು ತರಗೆಲೆಗಳ ಹಾಗೆ ಉದುರಿಹೋದರು.
ತಂಡದ ಪರ ಸಾಲ್ಟ್ 4, ವಿರಾಟ್ ಕೊಹ್ಲಿ 1, ರಜತ್ ಪಾಟಿದಾರ್ 23 (18), ಲಿಯಾಮ್ ಲಿವಿಂಗ್‌ಸ್ಟನ್ 4, ಜಿತೇಶ್ ಶರ್ಮಾ 2, ಕೃನಾಲ್ ಪಾಂಡ್ಯ 1, ಮನೋಜ್ ಭಾಂಡಗೆ 1, ಭುವನೇಶ್ವರ್ ಕುಮಾರ್ 8, ಯಶ್ ದಯಾಳ್ ಡಕ್‌ಔಟ್ ಹಾಗೂ ಯಾವುದೇ ರನ್ ಗಳಿಸದ ಹೇಜಲ್‌ವುಡ್ ಅಜೇಯರಾಗಿ ಉಳಿದರು. ಹೀಗೆ ತಂಡದ ಎಲ್ಲ ಆಟಗಾರರೂ ಮಕಾಡೆ ಮಲಗಿದರೆ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಏಕಾಂಗಿಯಾಗಿ ಹೋರಾಡಿ ತಂಡವನ್ನು ಅವಮಾನದಿಂದ ಪಾರು ಮಾಡಿದರು. 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 50 ರನ್ ಬಾರಿಸಿದರು.
11.5 ಎಸೆತದಲ್ಲಿ ಕೇವಲ 63 ರನ್‌ಗೆ ತನ್ನ 9ನೇ ವಿಕೆಟ್ ಕಳೆದುಕೊಂಡ ಆರ್‌ಸಿಬಿಯ ಅಂತಿಮ ಆಟಗಾರನಾಗಿ ಕಣಕ್ಕಿಳಿದ ಹೇಜಲ್‌ವುಡ್ ಅಂತಿಮ ಎಸೆತಕ್ಕೆ ವಿಕೆಟ್ ಒಪ್ಪಿಸದೇ ಹ್ಯಾಟ್ರಿಕ್ ವಿಕೆಟ್ ತಪ್ಪಿಸಿದ್ದಲ್ಲದೇ ಇನ್ನೊಂದೆಡೆ ಇದ್ದ ಟಿಮ್ ಡೇವಿಡ್‌ಗೆ ಸ್ಟ್ರೈಕ್ ಕೊಟ್ಟರು.
ಈ ಮೂಲಕ ಟಿಮ್ ಡೇವಿಡ್ ತಂಡದ ಹಾಗೂ ಮೈದಾನದ ತುಂಬಾ ತುಂಬಿದ್ದ ಅಭಿಮಾನಿಗಳನ್ನು ಭಾರೀ ಮುಖಭಂಗದಿಂದ ಪಾರು ಮಾಡಿದರು, ತಂಡವನ್ನು ಅಲ್ಪಮೊತ್ತಕ್ಕೆ ಆಲ್‌ಔಟ್ ಆಗುವುದರಿಂದ ಪಾರು ಮಾಡಿದರು. ಹೀಗೆ ತಂಡಕ್ಕೆ ಆಪದ್ಬಾಂಧವನಾದ ಟಿಮ್ ಡೇವಿಡ್‌ಗೆ ಮೈದಾನದಲ್ಲಿ ನೆರೆದಿದ್ದ ಆರ್‌ಸಿಬಿ ಅಭಿಮಾನಿಗಳು ಎದ್ದು ನಿಂತು ತಲೆಬಾಗಿ ಗೌರವ ಸಲ್ಲಿಸಿದರು. ಅಲ್ಲದೇ ಟಿಮ್ ಡೇವಿಡ್ ತಮ್ಮ ಅತ್ಯದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದರು.
ಈ ಮೂಲಕ ಈ ಬಾರಿಯ ಆವೃತ್ತಿಯಲ್ಲಿ ಪಂದ್ಯ ಸೋತರೂ ಪಂದ್ಯ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಸಾಧನೆಯನ್ನೂ ಸಹ ಟಿಮ್ ಡೇವಿಡ್ ಮಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


