ಕೊಳ್ಳೇಗಾಲ: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕೊಳ್ಳೇಗಾಲ ಭಾಗದಲ್ಲಿ ರೈಲ್ವೆ ಯೋಜನೆ ತರಲು ತಮಗೆ ತುಂಬಾ ಆಸೆ ಇದೆ, ಆದರೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಬೆಂಗಳೂರಿಗೆ ಹೋಗುವಾಗ ನಗರದ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್ ಅವರ ಆಹ್ವಾನದ ಮೇರೆಗೆ ಸಚಿವರು ಸಂಸ್ಥೆಗೆ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿ ಈ ಕ್ಷೇತ್ರದ ಸಂಸದ ಸುನಿಲ್ ಬೋಸ್ ಅವರಿಗೆ ಕಡತಗಳನ್ನು ಪತ್ತೆ ಹಚ್ಚಲು ಸೂಚಿಸಿದ್ದರೂ, ಈವರೆಗೆ ಆ ಕಡತಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ದೂರಿದರು. ಆದಾಗ್ಯೂ, ದಾವಣಗೆರೆ, ತುಮಕೂರು ಸೇರಿದಂತೆ ಕರ್ನಾಟಕದಲ್ಲಿ ಅಪೂರ್ಣವಾಗಿರುವ ಎಲ್ಲಾ ರೈಲ್ವೆ ಕಾಮಗಾರಿಗಳನ್ನು ಮುಂದುವರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ತಮಗೆ ಸಿಕ್ಕಿರುವ ಅವಕಾಶದಲ್ಲಿ ರಾಜ್ಯಕ್ಕೆ ಅನುದಾನಗಳನ್ನು ಪಡೆದು ರೈಲ್ವೆ ಅಭಿವೃದ್ಧಿಗೆ ಹೆಚ್ಚು ಗಮನ ಕೊಟ್ಟಿರುವುದಾಗಿ ಸಚಿವರು ಹೇಳಿದರು. ಮಹದೇಶ್ವರ ಕೃಪೆಯಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಕೊಳ್ಳೇಗಾಲದಲ್ಲಿ ಸ್ಥಳೀಯರ ಪ್ರೀತಿ ಮತ್ತು ಆತ್ಮೀಯ ಸ್ವಾಗತಕ್ಕೆ ಸಚಿವರು ಕೃತಜ್ಞತೆ ವ್ಯಕ್ತಪಡಿಸಿದರು. ತಾವು ಯಾವಾಗಲೂ ಕೊಳ್ಳೇಗಾಲಕ್ಕೆ ಬಂದಾಗ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಜುಲೈ 20ರಂದು ಸೋಮಣ್ಣ ಅವರ 75ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ಡಾ.ಎಸ್.ದತ್ತೇಶ್ ಕುಮಾರ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಂಗಡವಾಗಿ ಕೇಕ್ ಕತ್ತರಿಸಿ ಶುಭ ಹಾರೈಸಿದರು. ಹನೂರು ಶಾಸಕ ಎಂ.ಆರ್.ಮಂಜುನಾಥ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಎನ್.ಮಹೇಶ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಸುಂದರ್, ರಾಮಚಂದ್ರ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪುಟ್ಟಣ್ಣ, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಶುಭಕೋರಿದರು.
ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದರು. ಪಕ್ಷದಲ್ಲಿ ಭಿನ್ನಮತ ಉಂಟಾಗದಂತೆ ನಮ್ಮಂತಹ ಕಿಲಾಡಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಎಲ್ಲಿ, ಯಾವ ಸಂದರ್ಭದಲ್ಲಿ ಇಂಜೆಕ್ಷನ್ ಕೊಡಬೇಕೆಂಬುದು ತಿಳಿದಿದೆ ಎಂದು ಅವರು ಹೇಳಿದರು.
Ekka First Day Collection: ‘ಎಕ್ಕ’ ಮೊದಲ ದಿನ ಬಾಕ್ಸ್‌ಆಫೀಸ್ ಕಲೆಕ್ಷನ್ ಎಷ್ಟು?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


