ಬೆಂಗಳೂರು- ಸದನದಲ್ಲಿ ಸಚಿವರು ಕಡ್ಡಾಯವಾಗಿ ಹಾಜರಿರದಿದ್ದರೆ ಸದನವನ್ನು ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಸಂಗ ಜರುಗಿತು.
ಸದನದ ಕಲಾಪ ಆರಂಭವಾಗಿ ಪ್ರಶ್ನೋತ್ತರ ಅವಧಿ ನಡೆಯುತ್ತಿತ್ತು. ಈ ವೇಳೆ ಸದನದಲ್ಲಿ ಕಡ್ಡಾಯವಾಗಿ ಇರಬೇಕಾದ ಸಚಿವರ ಹೆಸರನ್ನು ಸಭಾಪತಿಯವರು ಪ್ರಕಟಿಸಿದರು.
ಅದರಂತೆ ಸಚಿವರಾದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಶಿವರಾಜ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತಿತರರು ಸದನದಲ್ಲಿ ಹಾಜರಿರಬೇಕಿತ್ತು. ಆದರೆ ಈ ವೇಳೆ ಚಲುವರಾಯಸ್ವಾಮಿ ಮತ್ತು ಶಿವಾನಂದ ಪಾಟೀಲರು ಹಾಜರಿದ್ದರು.
ಸದಸ್ಯರಾದ ಟಿ.ಎ.ಶರವಣ ಪ್ರಶ್ನೆ ಕೇಳಲು ಮುಂದಾದಾಗ, ಇಲಾಖೆಗೆ ಸಂಬಂಧಪಟ್ಟ ಸಚಿವರು ಇರಲಿಲ್ಲ. ಇದರಿಂದ ಬೇಸರಗೊಂಡ ಶರವಣ ಸೇರಿದಂತೆ ಸದಸ್ಯರು, ಸಚಿವರು ಸದನದಲ್ಲಿ ಇರದಿದ್ದರೆ ಯಾರನ್ನು ಪ್ರಶ್ನೆ ಕೇಳಬೇಕು? ನೀವು ಹೇಳಿದ ಮೇಲೂ ಇಲ್ಲ ಎಂದರೆ ಹೇಗೆ? ಎಂದು ಸದಸ್ಯರು ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಭಾಪತಿಗಳು ಸೂಚನೆ ಕೊಟ್ಟ ನಂತರವೂ ಸಚಿವರು ಗೈರು ಹಾಜರಾದರೆ ಈ ಸದನಕ್ಕೆ ಗೌರವವಿಲ್ಲವೇ?, ಕೆಲವು ಸಂದರ್ಭಗಳಲ್ಲಿ ನೀವು, ನಾನು ಹೇಳಬೇಕಾದ್ದನ್ನು ಹೇಳಬೇಕಾಗುತ್ತದೆ ಎಂದು ಹೇಳುತ್ತೀರಿ. ಒಂದು ಬಾರಿ ಅದನ್ನು ಸರ್ಕಾರಕ್ಕೆ ಹೇಳಿ ಎಂದು ಆಗ್ರಹಿಸಿದರು.
ಆಗ ಸಿ.ಟಿ.ರವಿ, 47 ವರ್ಷಗಳ ರಾಜಕೀಯ ಅನುಭವದಲ್ಲಿ ಯಾರಿಗೆ ಏನು ಹೇಳಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತು. ಸಮಯ ಸಂದರ್ಭ ನೋಡಿಕೊಂಡು ಹೇಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬೆಂಗಳೂರಿನಲ್ಲಿ ಆಪಲ್‌ನ ಬೃಹತ್ ಯೋಜನೆ: 1010 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


