ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೊಮ್ಮೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಜೈಲಿನಲ್ಲಿ ಹಾಸಿಗೆ ಮತ್ತು ದಿಂಬು ಸೇರಿದಂತೆ ಕೆಲವು ‘ಕನಿಷ್ಠ ಸೌಲಭ್ಯಗಳನ್ನು’ ಒದಗಿಸುವಂತೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮತ್ತು ಪ್ರಕರಣದ ಚಾರ್ಜ್ ಫ್ರೇಮ್ ಪ್ರಕ್ರಿಯೆಯನ್ನು ನ್ಯಾಯಾಲಯ ಸೆಪ್ಟೆಂಬರ್ 25 ಕ್ಕೆ ಮುಂದೂಡಿದೆ.
ಕಳೆದ ವಿಚಾರಣೆ ವೇಳೆ, ನ್ಯಾಯಾಲಯವು ದರ್ಶನ್‌ಗೆ ಹಾಸಿಗೆ ಮತ್ತು ದಿಂಬು ಒದಗಿಸುವಂತೆ ಆದೇಶ ನೀಡಿತ್ತು. ಆದಾಗ್ಯೂ, ಜೈಲಾಧಿಕಾರಿಗಳು ಈ ಆದೇಶವನ್ನು ಪಾಲಿಸಿಲ್ಲ ಎಂದು ದರ್ಶನ್ ಪರ ವಕೀಲರು ಹೊಸ ಅರ್ಜಿಯಲ್ಲಿ ದೂರಿದ್ದಾರೆ.
ವಕೀಲರ ವಾದವೇನು?
ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ, ಪಕ್ಕದ ಸೆಲ್‌ನಲ್ಲಿರುವ ಭಯೋತ್ಪಾದಕರಿಗೆ ಕ್ಯಾರಂ ಮತ್ತು ಟಿವಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ಕೇವಲ ಕೊಲೆ ಆರೋಪಿಯಾಗಿರುವ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ವಾದ ಮಂಡಿಸಿದ್ದಾರೆ.
ಚಾರ್ಜ್ ಫ್ರೇಮ್ ಮುಂದೂಡಿಕೆಗೆ ಕಾರಣವೇನು?
ರೇಣುಕಾಸ್ವಾಮಿ ಪ್ರಕರಣದ ಚಾರ್ಜ್ ಫ್ರೇಮ್ ಪ್ರಕ್ರಿಯೆ ಇಂದು ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು ಕೇಶವಮೂರ್ತಿ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ. ಜೊತೆಗೆ, ಕೆಲ ಆರೋಪಿಗಳ ‘ಡಿಶ್ಚಾರ್ಜ್ ಅಪ್ಲಿಕೇಷನ್’ ಕೂಡ ಬಾಕಿ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಚಾರಣೆ ಸಮಯದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


