ಹಿಂದುಳಿದ ಜನರಿಗೆ ಸಮಾಜದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ಎಂಬ ಪೆಡಂಭೂತಗಳ ಹಾವಳಿಯಿಂದಾಗಿ ಅರ್ಹ ಕೆಲಸಗಳನ್ನು ಪಡೆದುಕೊಳ್ಳಲಾಗದ ಪರಿಸ್ಥಿತಿ ಇದ್ದ ಕಾರಣ ಸಂವಿಧಾನದ ಮೂಲಕ ಮೀಸಲಾತಿ ತಂದು ಕೆಲಸ ಹಂಚಿಕೆಯಲ್ಲಿ ಸಮಾನತೆಯನ್ನು ತರುವ ಪ್ರಯತ್ನ ನಡೆಯಿತು.
ಈ ಹಿಂದಿನಿಂದಲೂ ಉಳ್ಳವರ ಕಾಲ್ತುಳಿತಕ್ಕೆ ಸಿಲುಕಿ ನಲುಗಿದ್ದ ಇಲ್ಲದವರು ಮೀಸಲಾತಿ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಬೆಳೆದು ನಿಂತರು, ಇನ್ನೂ ಸಹ ಬೆಳೆಯುತ್ತಿದ್ದಾರೆ. ಆದರೆ ಈ ಮೀಸಲಾತಿಗೆ ವಿರೋಧವೂ ಸಹ ಇದೆ. ಮೀಸಲಾತಿಯಿಂದ ಅವಕಾಶ ವಂಚಿತರಾಗುತ್ತಿದ್ದೇವೆ ಎಂಬ ಕೂಗು ಒಂದಷ್ಟು ಜನರಿಂದ ಕೇಳಿಬರುತ್ತಲೇ ಇದೆ. ಇದೇ ಕಾರಣವನ್ನಿಟ್ಟುಕೊಂಡು ಮೀಸಲಾತಿಯನ್ನು ರದ್ದುಪಡಿಸಬೇಕು ಎಂಬ ವಿರೋಧ ಸಹ ಇದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಚರ್ಚೆಗಳೂ ಸಹ ನಡೆಯುತ್ತಿರುತ್ತವೆ. ಅದೇ ರೀತಿ ಅನುರಾಧಾ ತಿವಾರಿ ಎಂಬುವರು ಸ್ಕ್ರೀನ್‌ಶಾಟ್ ಒಂದನ್ನು ಹಂಚಿಕೊಂಡಿದ್ದು, ಮೀಸಲಾತಿ ಖಾಸಗಿ ಕ್ಷೇತ್ರಕ್ಕೂ ಕಾಲಿಟ್ಟಿದೆಯಾ ಎಂಬ ಅನುಮಾನವನ್ನು ಹೊರಹಾಕಿದ್ದಾರೆ. ಹೌದು, ಟಾಟಾ ಎಐಎ ಇನ್ಶುರೆನ್ಸ್‌ನ ಟ್ಯಾಲೆಂಟ್ ಪೂಲ್‌ಗೆ ರಿಜಿಸ್ಟರ್ ಆಗಲು ಇರುವ ಪ್ರಕ್ರಿಯೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಜನರಲ್ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು, ಅದರಲ್ಲಿ ಜನರಲ್ ಆಯ್ಕೆ ಮಾಡಿರುವ ಅನುರಾಧಾ ಅದರ ಫೋಟೊ ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗಳೂ ಸಹ ವ್ಯಕ್ತವಾಗಿದ್ದು, ಅನೇಕರು ಇದು ಕೇವಲ ಮಾಹಿತಿ ಸಂಗ್ರಹಣೆಗಾಗಿ ಮಾಡುವ ಪ್ರಕ್ರಿಯೆಯೇ ಹೊರತು ಇದರ ಆಧಾರದ ಮೇಲೆ ಕೆಲಸವನ್ನು ನೀಡುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಈ ಒಂದು ಸ್ಕ್ರೀನ್‌ಶಾಟ್ ಹಲವರಲ್ಲಿ ಗೊಂದಲವನ್ನು ಹುಟ್ಟುಹಾಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


