ಕೇರಳದ ಪುರಾಣ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗಿದೆ. ಮಂಡಲ ಮಕರ ಜ್ಯೋತಿ ಮಾಸಾಚರಣೆ ಹಿನ್ನಲೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಈ ಬಾರಿ ಶಬರಿಮಲೆ ಯಾತ್ರಿಕರಿಗೆ ಮಿದುಳು ಜ್ವರದ ಆತಂಕ ಎದುರಾಗಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ (ನೇಗ್ಲೇರಿಯಾ ಫೌಲೇರಿ) ಕುರಿತಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಿದ್ದು, ಸುರಕ್ಷತಾ ಸಲಹಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯಲ್ಲಿ ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿ (Naegleria fowleri) ಇಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (Amoebic meningoencephalitis) ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಶಬರಿಮಲೆ ಯಾತ್ರಿಕರಿಗೆ ತಮ್ಮ ಆರೋಗ್ಯದ ಬಗ್ಗೆ, ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕ ಸುರಕ್ಷಿತಾ ಕ್ರಮಗಳನ್ನು ಪಾಲಿಸುವ ಕುರಿತು ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಸಲಹೆಗಳು
- ನೇಗ್ಲೇರಿಯಾ ಫೌಲೇರಿ (Naegleria fowler) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳ/ ಈಜು ಕೊಳಗಳು ಹಾಗೂ ಕರೆ.
- ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ.
- ನೇಗ್ಲೇರಿಯಾ ಫೌಲೇರಿ (Naegeria fowleri) ಅತ್ಯಂತ ವಿಷಕಾರಿ (irulent) ಸೂಕ್ಷ್ಮ ಜೀವಿಯಾಗಿದ್ದು ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (Amoebic meningoencephalitis) ಎನ್ನುವ ಅಪರೂಪದ ಗಂಭೀರ ಮಾರಣಾಂತಿಕ ಖಾಯಿಲೆಯನ್ನು ಉಂಟುಮಾಡುತ್ತದೆ.
- ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್‌ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕ ವಹಿಸಿ.
- ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ/ ವಾಂತಿ, ಕುತ್ತಿಗೆ ಬಿಗಿತ ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ವತೆ (behavioural disorders) ಲಕ್ಷಣಗಳು ಕಾಣಿಸಿಕೊಂಡರೆ, ನಿರ್ಲಕ್ಷಿಸದೆ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ ವೈದರನ್ನು ಸಂಪರ್ಕಿಸಿ.
14 ಗಂಟೆ ಕಾಯಬೇಕಿದೆ: ಶಬರಿಮಲೆಗೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ದೇವರ ದರ್ಶನಕ್ಕೆ 14 ಗಂಟೆ ಕಾಯಬೇಕಿದೆ. ಪ್ರತಿದಿನ 1 ಲಕ್ಷ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ.
ಭಕ್ತರನ್ನು ನಿಯಂತ್ರಿಸಲು ನೀಲಕ್ಕಲ್‌ನಲ್ಲಿ 7 ಟಿಕೆಟ್ ಕೌಂಟರ್‌ಗಳ ವ್ಯವಸ್ಥೆಯನ್ನು ಕೇರಳ ಸರ್ಕಾರ ಮಾಡಿದೆ. ಸುಮಾರು 2 ಲಕ್ಷ ಭಕ್ತರು ದರ್ಶನಕ್ಕಾಗಿ ಕಾದು ಕುಳಿತಿದ್ದಾರೆ. ದೇವರ ದರ್ಶನಕ್ಕೆ ಬಂದ ಮಕ್ಕಳು ಕಾದು ಕಾದು ಹೈರಾಣಾಗಿದ್ದಾರೆ.
ಪ್ರತಿದಿನ ಆನ್‌ಲೈನ್ ಮೂಲಕ 70 ಸಾವಿರಕ್ಕೂ ಅಧಿಕ ಭಕ್ತರಿಗೆ ದರ್ಶನದ ಟಿಕೆಟ್ ನೀಡಲಾಗುತ್ತಿದೆ. ಸ್ಪಾಟ್ ಬುಕ್ಕಿಂಗ್ ಮೂಲಕ 20 ಸಾವಿರ ಟಿಕೆಟ್ ನೀಡಲಾಗುತ್ತಿದೆ. ಡಿಸೆಂಬರ್ 2ರ ತನಕದ ವರ್ಚುವಲ್ ಕ್ಯೂ ಬುಕ್ಕಿಂಗ್ ಈಗಾಗಲೇ ಅಂತ್ಯಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇರಳ ಸರ್ಕಾರ ಸಹ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಮಿದುಳು ಜ್ವರದ ಎಚ್ಚರಿಕೆಯನ್ನು ನೀಡಿದೆ. ಸ್ನಾನ ಮಾಡುವಾಗ ಎಚ್ಚರವಹಿಸಬೇಕು ಎಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ದೇವರ ದರ್ಶನಕ್ಕೆ ಆಗಮಿಸಿರುವ ಭಕ್ತರು ಈಗಾಗಲೇ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ವೈದ್ಯಕೀಯ ದಾಖಲೆಗಳನ್ನು ಇಟ್ಟುಕೊಳ್ಳಿ ಎಂದು ಸಹ ಕೇರಳದ ಆರೋಗ್ಯ ಇಲಾಖೆ ಸಲಹೆ ನೀಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


