ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಕೊಲೆ ಪ್ರಕರಣದ ಆರೋಪಿ ಮತ್ತು ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್‌ನನ್ನು ಬುಧವಾರ ಎನ್‌ಐಎ ಬಂಧಿಸಿದೆ. ಅಮೆರಿಕದಲ್ಲಿ ಅಡಗಿದ್ದ ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
ಎನ್‌ಐಎ ಅಧಿಕಾರಿಗಳು ಅಮೆರಿಕದಿಂದ ವಿಮಾನದಲ್ಲಿ ಅನ್ಮೋಲ್ ಬಿಷ್ಣೋಯ್‌ನನ್ನು ನವದೆಹಲಿಗೆ ಕರೆದುಕೊಂಡು ಬಂದರು. ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಎನ್ಐಎ ಹೇಳಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದೆ.
ಭಾರತದಲ್ಲಿ ಜೈಲಿನಲ್ಲಿರುವ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಮತ್ತು ಆಪ್ತನಾಗಿದ್ದ ಅನ್ಮೋಲ್ ಬಿಷ್ಣೋಯ್ ಹಲವು ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ. ಈತರ ಕುರಿತು ಮಾಹಿತಿ ನೀಡಿದರೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿತ್ತು.
ಅನ್ಮೋಲ್ ಬಿಷ್ಣೋಯ್ ಯಾರು?; ಅನ್ಮೋಲ್ ಬಿಷ್ಣೋಯ್ ಭಾರತದಿಂದ 2022ರಿಂದ ಪರಾರಿಯಾಗಿದ್ದ. ಎನ್‌ಐಎ ಭಾರತದಲ್ಲಿನ ಉಗ್ರ-ಗ್ಯಾಂಗ್‌ಸ್ಟರ್ ಸಂಚು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಈಗ 19ನೇ ಆರೋಪಿ.
2020ರಿಂದ 2023ರವರೆಗೆ ಲಾರೆನ್ಸ್ ಬಿಷ್ಣೋಯಿ ಮತ್ತು ಘೋಷಿತ ಉಗ್ರ ಗೋಲ್ಡಿ ಬ್ರಾರ್‌ಗೆ ಅನೇಕ ಉಗ್ರ ಕೃತ್ಯಗಳಲ್ಲಿ ಸಹಾಯ ಮಾಡಿದ ಪ್ರಕರಣದಲ್ಲಿ ಅನ್ಮೋಲ್ ಬಿಷ್ಣೋಯ್ ವಿರುದ್ಧ 2023ರ ಮಾರ್ಚ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಅನ್ಮೋಲ್ ಬಿಷ್ಣೋಯ್ ಅಮೆರಿಕಾದಲ್ಲಿದ್ದ ಮತ್ತು ಅಲ್ಲಿಂದಲೇ ತನ್ನ ಕಾರ್ಯಚಟುವಟಿಕೆಯನ್ನು ಭಾರತದಲ್ಲಿ ನಡೆಸುತ್ತಿದ್ದ. ಗ್ಯಾಂಗ್ ಸ್ಟಾರ್ ಶೂಟರ್‌ಗಳಿಗೆ ಆಶ್ರಯ ಮತ್ತು ಲಾಜಿಸ್ಟಿಕಲ್ ಸಹಾಯ ಒದಗಿಸುತ್ತಿದ್ದ. ಭಾರತದಲ್ಲಿನ ತನ್ನ ಸಹಚರರ ಮೂಲಕ ಸುಲಿಗೆಯನ್ನು ನಡೆಸುತ್ತಿದ್ದ.
ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಬಳಿಕ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅನ್ಮೋಲ್ ಬಿಷ್ಣೋಯ್ ಹಾಜರುಪಡಿಸಲಾಗುತ್ತದೆ. ಬಳಿಕ ಎನ್‌ಐಎ ಆತನನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದೆ. ಮಂಗಳವಾರ ಅಮೆರಿಕ ಅನ್ಮೋಲ್ ಬಿಷ್ಣೋಯ್ ಗಡಿಪಾರು ಮಾಡಿತ್ತು, ಅಲ್ಲಿಗೆ ತೆರಳಿದ ಎನ್‌ಐಎ ತಂಡ ಆತನನ್ನು ಭಾರತಕ್ಕೆ ಕರೆದುಕೊಂಡು ಬಂದಿದೆ.
ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿಯನ್ನು 2024ರ ಅಕ್ಟೋಬರ್ 12ರಂದು ಹತ್ಯೆ ಮಾಡಲಾಗಿತ್ತು. ಮುಂಬೈನ ಬಾಂದ್ರಾದಲ್ಲಿನ ಅವರ ಕಚೇರಿಯಲ್ಲಿ ಮಗನ ಮುಂದೆಯೇ ಈ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ 26 ಜನರನ್ನು ಬಂಧಿಸಲಾಗಿದೆ. ಅನ್ಮೋಲ್ ಬಿಷ್ಣೋಯ್ ಸಹ ಈ ಪ್ರಕರಣದಲ್ಲಿ ಆರೋಪಿ.
ಪಂಜಾಬ್‌ನಲ್ಲಿ ನಡೆದ ಗಾಯಕ ಸಿದ್ದು ಮೋಸೆವಾಲ ಕೊಲೆ ಪ್ರಕರಣ, ನಟ ಸಲ್ಮಾನ್ ಖಾನ್ ನಿವಾಸದ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿಯೂ ಅನ್ಮೋಲ್ ಬಿಷ್ಣೋಯ್ ಭಾಗಿಯಾಗಿದ್ದಾನೆ. 2024ರಲ್ಲಿಯೇ ಅಮೆರಿಕದಲ್ಲಿ ಅನ್ಮೋಲ್ ಬಿಷ್ಣೋಯ್ ಬಂಧಿಸಲಾಗಿತ್ತು. ಭಾರತದ ಕೋರಿಕೆಯ ಮೇರೆಗೆ ಈಗ ಆತನನ್ನು ಗಡಿಪಾರು ಮಾಡಲಾಗಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಕೃತ್ಯಗಳು ದೆಹಲಿ, ಪಂಜಾಬ್, ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ, ಚಂಡೀಗಢ , ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿದೆ. ಇವುಗಳಲ್ಲಿ ಹಲವಾರು ಕೃತ್ಯಗಳಲ್ಲಿ ಅನ್ಮೋಲ್ ಬಿಷ್ಣೋಯ್ ಭಾಗಿಯಾಗಿದ್ದಾನೆ.
ಅನ್ಮೋಲ್ ಬಿಷ್ಣೋಯ್ 2011ರಲ್ಲಿ ಎಸ್ಒಪಿಒ ಎಂಬ ಸಂಘಟನೆ ರಚಿಸಿಕೊಂಡಿದ್ದ. ಅಲ್ಲದೇ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ. ಈ ಸಮಯದಲ್ಲಿ ಹಲ್ಲೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪ ಆತನ ವಿರುದ್ಧ ಕೇಳಿ ಬಂದಿತ್ತು. ಈತ ತನ್ನ ಗ್ಯಾಂಗ್ ಮೂಲಕ ಚಂಡೀಗಢ ಮತ್ತು ಪಂಜಾಬ್‌ನಲ್ಲಿ ಹಲವಾರು ಗ್ಯಾಂಗ್ ವಾರ್‌ಗಳಲ್ಲಿ ಪಾಲ್ಗೊಂಡಿದ್ದ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


