ಕರ್ನಾಟಕ ಸರ್ಕಾರ ಕೈಗೊಂಡಿದ್ದ ಜಾತಿ ಗಣತಿ ಅಥವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಅಕ್ಟೋಬರ್ 31ಕ್ಕೆ ಮುಕ್ತಾಯವಾಗಿದೆ. ಈ ಸಮೀಕ್ಷೆ ಕುರಿತು ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ. ಸರ್ಕಾರಕ್ಕೆ ಸಹ ವರದಿ ಸಲ್ಲಿಕೆಯಾಗಿಲ್ಲ.
ಆದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ವರದಿ ಎಂದು ಅಂಕಿ-ಅಂಶಗಳನ್ನು ಹಂಚಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ. ಆದ್ದರಿಂದ ಕ್ರಿಮಿನಲ್ ಕೇಸ್ ದಾಖಲು ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮೀಕ್ಷಾ ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸುಳ್ಳು ಮಾಹಿತಿ ಪ್ರಕಟಿಸಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮಾಹಿತಿ ಹಂಚಿಕೊಳ್ಳಬೇಡಿ: ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 28665/2025, 28668/2025 ಮತ್ತು 28675/2025 ಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ 2025ನೇ ಸೆಪ್ಟೆಂಬರ್ 25ರ ಆದೇಶದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೂಚನೆ ನೀಡಿದೆ.
ಅದರಂತೆ ಆಯೋಗದಿಂದ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಫಿಡೆವಿಟ್ ಅನ್ನು ಸಲ್ಲಿಸಲಾಗಿರುತ್ತದೆ. ಸಮೀಕ್ಷೆಯ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಬದ್ಧತೆಯನ್ನು ಆಯೋಗ ಹೊಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.
2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ವಿವಿಧ ಜಾತಿಗಳ ಜನಸಂಖ್ಯೆಯ ತಪ್ಪು ಮಾಹಿತಿಯನ್ನು ವಾಟ್ಸಪ್‌ನಲ್ಲಿ ಶೇರ್ ಮಾಡಿರುವ ಇಬ್ಬರು ವ್ಯಕ್ತಿಯಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.
ಸಮೀಕ್ಷಾ ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್, ಇನ್ಸ್‌ಟಾಗ್ರಾಂ ಇತ್ಯಾದಿಗಳಲ್ಲಿ ಹಂಚಿಕೊಂಡಲ್ಲಿ ಇದಕ್ಕೆ ಕಾರಣರಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಆದ್ದರಿಂದ ಈ ರೀತಿ ಯಾವುದೇ ಸುಳ್ಳು/ ತಪ್ಪು ಮಾಹಿತಿಯನ್ನು ಸೃಜಿಸಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸದಂತೆ ಹಾಗೂ ಬಂದಿರುವ ಮಾಹಿತಿಯನ್ನು ಫಾರ್ವರ್ಡ್ ಮಾಡದಂತೆ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಮುಕ್ತಾಯಗೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಮತ್ತು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿರುವ ಸಮೀಕ್ಷಾದಾರರಿಗೆ ಗೌರವಧನದ ಮೊತ್ತವನ್ನು ಪಾವತಿಸಲು ಸರ್ಕಾರ ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿದೆ.
ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಂಗ್ರಹವಾಗುವ ದತ್ತಾಂಶದಿಂದ ನೂತನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದದಿಂದ ನಡೆಸಲಾಗಿರುವ ಸಮೀಕ್ಷೆಯ ವರದಿ ಸರ್ಕಾರಕ್ಕೆ 2026ರ ಫೆಬ್ರವರಿಯಲ್ಲಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಆದರೆ ಈಗಲೇ ಹಲವಾರು ಕಡೆ ಸಮೀಕ್ಷೆಯ ವರದಿ ಎಂದು ಸುಳ್ಳು ಮಾಹಿತಿಯನ್ನು ಹಂಚಿಕೆ ಮಾಡಲಾಗುತ್ತಿದೆ. ಆದ ಕಾರಣ ಎಚ್ಚರಿಕೆಯನ್ನು ನೀಡಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


