ಬೆಳಗಾವಿ: ಆಯುಷ್ ಇಲಾಖೆಯಲ್ಲಿ ಸ್ಥಾನಪನ್ನ ಮಾದರಿಯಲ್ಲಿ ಹಾಗೂ ಕಾಲಮಿತಿ ಆಧಾರದ ಮೇಲೆ ಶೀಘ್ರ ಮುಂಬಡ್ತಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ರವಿಸುಬ್ರಹಣ್ಯ ಎಲ್.ಎ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೂ ಬದಲಾವಣೆ ತರಲಾಗುವುದು. ಅಲ್ಲಿಯವರೆಗೂ ಕಾಯದೆ ಮುಂಬಡ್ತಿ ನೀಡಲಾಗುವುದು ಎಂದರು.
ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ಹುದ್ದೆಯಿಂದ ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ಮುಖಾಂತರ 95 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಒಟ್ಟು 116 ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗಳು ಮಂಜೂರಾಗಿವೆ. ಕಳೆದ ಆರೇಳು ವರ್ಷಗಳಿಂದ ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯ ತಾಲ್ಲೂಕು ಆಸ್ಪತ್ರೆಗಳನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು 129.89 ಕೋಟಿ ರೂ.ಗಳಿಗೆ ಆಡಳಿತಾತಕ ಅನುಮೋದನೆ ನೀಡಲಾಗಿದೆ. ಈಗಾಗಲೇ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಜನವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಎನ್.ಟಿ.ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದರು.
ಹಂಪಿ ಉತ್ಸವದ ಸಂದರ್ಭದಲ್ಲೇ ಹೊಸಪೇಟೆಯಲ್ಲಿ ಜಿಲ್ಲಾಸ್ಪತ್ರೆಯ ಉದ್ಘಾಟನೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಮಗಳು ಹುಟ್ಟಿದ ಸಂಭ್ರಮಕ್ಕೆ ‘ಧುರಂಧರ್’ ಸ್ಟೆಪ್ ಹಾಕಿದ ತಂದೆ:ವೈರಲ್ ವಿಡಿಯೊ ಇಲ್ಲಿದೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


