ನ್ಯೂ ಚಂಡೀಗಢ್: ಮುಲ್ಲಾನ್‌ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 20 ) ನಡೆಯಲಿರುವ 18ನೇ ಐಪಿಎಲ್‌ನ 37ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ.
ಇಂದು ಭಾನುವಾರದ ಕಾರಣ ಡಬಲ್ ಹೆಡರ್ ಆಯೋಜನೆಯಾಗಿದ್ದು, ಈ ಪಂದ್ಯ ಮಧ್ಯಾಹ್ನ ಆರಂಭವಾಗಲಿದೆ. ಇನ್ನು ಮೊನ್ನೆ ( ಏಪ್ರಿಲ್ 18 ) ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಇದೇ ತಂಡಗಳು ಕಣಕ್ಕಿಳಿದಿದ್ದವು.
ಮಳೆ ಕಾರಣದಿಂದಾಗಿ 14 ಓವರ್‌ಗಳಿಗೆ ಸೀಮಿತವಾಗಿ ನಡೆದಿದ್ದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲನ್ನು ಕಂಡಿತ್ತು. ಪಂಜಾಬ್ ಕಿಂಗ್ಸ್ ಬೌಲಿಂಗ್ ದಾಳಿ ಮುಂದೆ ಮಂಕಾಗಿದ್ದ ಆರ್‌ಸಿಬಿ ಮೂರನೇ ಬಾರಿಗೆ ತವರಿನಲ್ಲಿ ಮುಖಭಂಗ ಅನುಭವಿಸಿದರು.
ಇನ್ನು ಪಂದ್ಯದುದ್ದಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಎಂದಿನ ಪಂದ್ಯಗಳ ಹಾಗೆ ಆ ಪಂದ್ಯದಲ್ಲಿಯೂ ಸಹ ತಮ್ಮ ತಂಡಕ್ಕೆ ಚಿಯರ್ ಮಾಡಿದ್ದರು. ಪಂದ್ಯ ಮುಗಿದ ಬಳಿಕ ಪಂಜಾಬ್ ಕಿಂಗ್ಸ್‌ನ ನಾಯಕ ಶ್ರೇಯಸ್ ಐಯ್ಯರ್ ಕಿವಿಗೆ ಕೈ ಅಡ್ಡವಿಟ್ಟುಕೊಂಡು ಇವಾಗ ಸೌಂಡ್ ಕೇಳಿಸ್ತಾ ಇಲ್ಲ ಎಂದು ಸನ್ನೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳನ್ನು ಕಿಚಾಯಿಸಿದ್ದರು.
ಈ ಹಿಂದೆ ಇದೇ ರೀತಿ ನಡೆದುಕೊಂಡ ಹಲವಾರು ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಅದರಲ್ಲಿಯೂ ವಿರಾಟ್ ಕೊಹ್ಲಿ ಅವರದ್ದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಹಾಗಾಗಿ ಶ್ರೇಯಸ್ ಐಯ್ಯರ್‌ಗೂ ಸಹ ಇಂತಹದ್ದೇ ಉತ್ತರ ಕೊಹ್ಲಿ ಕಡೆಯಿಂದ ಬರುವ ಸಾಧ್ಯತೆಗಳಿವೆ ಎನ್ನಬಹುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


