ರೈಲು ನಿಲ್ದಾಣಗಳ ಶುಚಿತ್ವ ಹಾಗೂ ಅಲ್ಲಿನ ಕೆಲ ಮೋಸದ ಕುರಿತಾದ ಸುದ್ದಿಗಳಿಗೇನು ಕಡಿಮೆಯಿಲ್ಲ. ವಾರಕ್ಕೊಂದಾದರೂ ಈ ಕುರಿತ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಇದೀಗ ಅಂತಹದ್ದೇ ಮತ್ತೊಂದು ವಿಡಿಯೊ ವೈರಲ್ ಆಗಿದ್ದು, ನಿಲ್ದಾಣದಲ್ಲಿ ಸಮೋಸ ಖರೀದಿಸಿದ ವ್ಯಕ್ತಿಯೊಬ್ಬ ಹಣ ಪಾವತಿಸಲು ಮುಂದಾಗಿದ್ದಾರೆ. ಆದರೆ ಆ ಸಮಯಕ್ಕೆ ಯುಪಿಐ ಕೈಕೊಟ್ಟಿದ್ದು, ಪಾವತಿ ಮಾಡಲಾಗಿಲ್ಲ. ಈ ಸಂದರ್ಭದಲ್ಲಿ ಸಮೋಸ ಮಾರಾಟಗಾರ ಹಣ ನೀಡುವಂತೆ ಪ್ರಯಾಣಿಕನ ಬಟ್ಟೆ ಹಿಡಿದು ಎಳೆದಾಡಿದ್ದಾನೆ.
ಪ್ರಯಾಣಿಕ ಯುಪಿಐ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರೂ ಕೇಳದೇ ಹಣಕ್ಕಾಗಿ ಪಟ್ಟು ಹಿಡಿದಿದ್ದಾನೆ. ಅತ್ತ ಪ್ರಯಾಣಿಕ ತೆರಳಬೇಕಿದ್ದ ರೈಲು ಚಲಿಸಲಾರಂಭಿಸಿದೆ. ಈ ವೇಳೆ ವಿಧಿ ಇಲ್ಲದೇ ಪ್ರಯಾಣಿಕ ತನ್ನ ಕೈನಲ್ಲಿದ್ದ ಸ್ಮಾರ್ಟ್ ವಾಚ್ ತೆಗೆದು ಮಾರಾಟಗಾರನ ಕೈಗೆ ಕೊಟ್ಟಿದ್ದಾರೆ.
ಮಾರಾಟಗಾರ ಸ್ವಲ್ಪವೂ ಮಾನವೀಯತೆ ಇಲ್ಲದೇ ಸ್ಮಾರ್ಟ್ವಾಚ್ ಪಡೆದು ಸಮೋಸ ನೀಡಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಿನದಿಂದ ದಿನಕ್ಕೆ ರೈಲು ನಿಲ್ದಾಣ ಮಾರಾಟಗಾರರ ಹಾವಳಿ ಹಾಗೂ ಹಿಂಸೆ ಹೆಚ್ಚಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಭಾರತೀಯ ರೈಲ್ವೆ ಆ ಮಾರಾಟಗಾರನನ್ನು ಗುರುತಿಸಿ ಪತ್ತೆಹಚ್ಚಿ ಕ್ರಮ ಕೈಗೊಂಡಿದೆ. ಇನ್ನು ಈ ಘಟನೆ ಮಧ್ಯ ಪ್ರದೇಶದ ಜಬಲ್ಪುರ ರೈಲು ನಿಲ್ದಾಣದಲ್ಲಿ ನಡೆದಿದ್ದು, ಮಾರಾಟಗಾರ ಸಂದೀಪ್ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಿ ಆತನ ಪರವಾನಗಿಯನ್ನು ರದ್ದು ಮಾಡಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


