ಪ್ರಸ್ತುತ ನಡೆಯುತ್ತಿರುವ ವನಿತೆಯರ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ 20ನೇ ಪಂದ್ಯದಲ್ಲಿ ನಿನ್ನೆ ( ಅಕ್ಟೋಬರ್ 19 ) ಭಾರತ ತಂಡ ಇಂಗ್ಲೆಂಡ್ ವಿರುದ್ಧ 4 ರನ್‌ಗಳ ಸೋಲನ್ನು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರು 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿ ಭಾರತಕ್ಕೆ 289 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿ ಗೆಲ್ಲುವ ನಿರೀಕ್ಷೆ ಹುಟ್ಟುಹಾಕಿದ್ದ ಭಾರತ ಕೊನೆಯಲ್ಲಿ ಎಡವಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತು.
ಸುಲಭವಾಗಿ ಗೆಲ್ಲಬಹುದಿದ್ದ ಪಂದ್ಯವನ್ನು ಭಾರತ ತಂಡ ಕೈಚೆಲ್ಲಿದ್ದು, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸೋತ ಬಳಿಕ ಹ್ಯಾಟ್ರಿಕ್ ಸೋಲನ್ನು ಕಂಡು ಸೆಮಿಫೈನಲ್ ಪ್ರವೇಶಾತಿಯ ಅನುಮಾನ ಮೂಡಿಸಿದೆ.
ಹೀಗೆ ಭಾರತ ಸತತ ಮೂರು ಸೋಲುಗಳನ್ನು ಕಂಡಿದ್ದಕ್ಕೆ, ಅದರಲ್ಲೂ ಇಂಗ್ಲೆಂಡ್ ವಿರುದ್ಧ ಸೋತ ಪರಿಗೆ ಕ್ರಿಕೆಟ್ ಪ್ರೇಮಿಗಳು ಕಿಡಿಕಾರುತ್ತಿದ್ದು, ಭಾರತ ವನಿತೆಯರ ತಂಡವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. ಇವರಿಗೆ ಭಾರತ ಪುರುಷರ ತಂಡದ ಹಾಗೆ ಸಮಾನವಾದ ಸಂಭಾವನೆ ನೀಡಬೇಕು, ಆದರೆ ಪ್ರದರ್ಶನ ಮಾತ್ರ ಪಾಕಿಸ್ತಾನ ಹಾಗೂ ಉಗಾಂಡ ತಂಡಗಳ ಹಾಗಿದೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಬಿಸಿಸಿಐ ಇಂತಹ ವ್ಯರ್ಥ ಆಟಗಾರ್ತಿಯರ ತಂಡದ ಮೇಲೆ ದುಂದು ವೆಚ್ಚ ಮಾಡುವ ಬದಲು ಸುಮ್ಮನಿರುವುದೇ ಲೇಸು ಎಂದಿದ್ದಾರೆ. ತವರಿನಲ್ಲಿಯೇ ನಡೆಯುತ್ತಿರುವ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವುದೂ ಸಹ ಅನುಮಾನ ಎಂಬ ಮಟ್ಟಕ್ಕೆ ಪ್ರದರ್ಶನ ನೀಡುವ ಇವರಿಗೇಕೆ ಬೆಂಬಲ ಎಂದು ಆಕ್ರೋಶ ಹೊರಹಾಕಿದ್ದಾರೆ ನೆಟ್ಟಿಗರು.
ರೀಲ್ಸ್ ಮಾಡುವುದಕ್ಕೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕೆ ಬೇಕಾಗುವ ವಿಡಿಯೊ ಮಾಡುವುದಕ್ಕೆ ಯಾವಾಗಲೂ ಸಿದ್ಧರಿರುವ ಇವರು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಂತಹ ದೈತ್ಯ ತಂಡಗಳ ಎದುರು ಚೆನ್ನಾಗಿ ಆಡಿ ಎಂದರೆ ಮಾತ್ರ ಇವರಿಂದ ಆಗುವುದಿಲ್ಲ ಎಂದು ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


