ಇತ್ತೀಚಿನ ದಿನಗಳಲ್ಲಿ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಅತ್ಯಂತ ಸುಲಭವಾದ ಮತ್ತು ಪರಿಣಾಮಕಾರಿ ವ್ಯಾಯಾಮವೆಂದರೆ ವಾಕಿಂಗ್. ಇದಕ್ಕೆ ಯಾವುದೇ ಉಪಕರಣಗಳ ಅಗತ್ಯವಿಲ್ಲ, ಯಾವುದೇ ವೆಚ್ಚವಿಲ್ಲ. ವಾಕಿಂಗ್ ಎಂದರೆ ಕೇವಲ ತೂಕ ಇಳಿಸಿಕೊಳ್ಳುವುದು ಮತ್ತು ಹೊಟ್ಟೆಯ ಕೊಬ್ಬು ಕರಗಿಸುವುದು ಎಂದು ಅನೇಕರು ಭಾವಿಸಿದ್ದಾರೆ. ಆದರೆ, ಪ್ರತಿದಿನ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳು ಅಪಾರ!
ಆರೋಗ್ಯ ತಜ್ಞರು ಹೇಳುವಂತೆ, ಮಧುಮೇಹ, ರಕ್ತದೊತ್ತಡ ಮತ್ತು ಹೃದಯದ ಕಾಯಿಲೆ ಹೊಂದಿರುವವರು ಪ್ರತಿದಿನ ವಾಕ್ ಮಾಡಲೇಬೇಕು. ನಿರಂತರವಾಗಿ ಕೇವಲ ಮೂವತ್ತು ನಿಮಿಷಗಳ ಕಾಲ ವಾಕ್ ಮಾಡಿದರೆ, ನಿಮ್ಮ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ವಾಕಿಂಗ್ ನಿಮ್ಮ ದೇಹಕ್ಕೆ ತ್ವರಿತ ಚೈತನ್ಯ ನೀಡಿ, ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಬದಲಾವಣೆ ತರಲು ಸಾಧ್ಯವಿದೆ.
ನಿತ್ಯ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?
ವಾಕಿಂಗ್ ತುಂಬಾ ಸರಳವಾದರೂ ಅತ್ಯಂತ ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಂದ ಹಿಡಿದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಬಯಸುವವರೆಗೆ ಎಲ್ಲರಿಗೂ ವಾಕಿಂಗ್ ಉಪಯುಕ್ತ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ ವಾಕಿಂಗ್‌ಗೆ ಸ್ವಲ್ಪ ಸಮಯ ಮೀಸಲಿಡುವುದು ತುಂಬಾ ಅಗತ್ಯ. ಸಾಮಾನ್ಯವಾಗಿ ಹಲವು ಮಂದಿ ಬೆಳಿಗ್ಗೆ ಅಥವಾ ಸಂಜೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ವಲ್ಪ ಸಮಯ ವಾಕಿಂಗ್ ಮಾಡುವ ಅಭ್ಯಾಸ ಹೊಂದಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕನಿಷ್ಠ 30 ನಿಮಿಷಗಳು ವಾಕಿಂಗ್ ಮಾಡುವ ಅಭ್ಯಾಸ ಬೆಳೆಯಿಸಿದರೆ ದೇಹದಲ್ಲಿ ಹಲವು ಒಳ್ಳೆಯ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದು ದೇಹದ ಮೆಟಾಬಾಲಿಸಂ ಹೆಚ್ಚಿಸಲು, ಹೃದಯದ ಆರೋಗ್ಯ ಸುಧಾರಿಸಲು, ತೂಕ ನಿಯಂತ್ರಣವಿಡಲು ಮತ್ತು ಒಟ್ಟಾರೆ ಶಾರೀರಿಕ–ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯಕ.
ಮಧುಮೇಹ ತಡೆಯಲು
ಪ್ರತಿದಿನ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸುವ ಅತ್ಯುತ್ತಮ ಮತ್ತು ಸರಳ ಮಾರ್ಗಗಳಲ್ಲಿ ಒಂದಾಗಿದೆ ಎಂದು ತಜ್ಞರು ಹೇಳುತ್ತಾರೆ. ವಾಕಿಂಗ್ ಒಂದು ಸುಲಭ ವ್ಯಾಯಾಮವಾಗಿದ್ದು, ರಕ್ತದೊಳಗೆ ಶುಗರ್ ಅತಿಯಾಗಿ ಬಿಡುಗಡೆ ಆಗುವುದನ್ನು ತಡೆದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಮಧುಮೇಹಿಗಳು ತಪ್ಪದೇ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಬೇಕು.
ವಿಶೇಷವಾಗಿ ಮಧುಮೇಹ ಪೂರ್ವ ಹಂತದಲ್ಲಿರುವವರು ಹಾಗೂ ಟೈಪ್–2 ಮಧುಮೇಹದಿಂದ ಬಳಲುತ್ತಿರುವವರು ವಾಕಿಂಗ್ ಅನ್ನು ಪ್ರತಿನಿತ್ಯದ ದಿನಚರಿಯಲ್ಲಿ ಸೇರಿಸುವುದು ಅತ್ಯಂತ ಅಗತ್ಯ. ವಾಕಿಂಗ್ ಮಾಡುವುದರಿಂದ ಮೂಳೆಗಳ ಆರೋಗ್ಯ ಸುಧಾರುತ್ತದೆ, ಮೊಣಕಾಲಿನ ನೋವು ಕಡಿಮೆಯಾಗುತ್ತದೆ ಹಾಗೂ ನಿಯಮಿತ ವಾಕಿಂಗ್ ಮೂಳೆ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ಸಹ ಸಹಾಯಕ.
ಮೂಳೆಗಳನ್ನು ಬಲಪಡಿಸುತ್ತದೆ
ವಾಕಿಂಗ್ ಕೇವಲ ಸುಮ್ಮನೆ ನಡೆದಾಡುವುದಲ್ಲ, ಇದು ತೂಕ ಹೊರುವ ವ್ಯಾಯಾಮ (Weight-Bearing Exercise) ಆಗಿದೆ. ಅಂದರೆ, ನೀವು ನಡೆಯುವಾಗ ನಿಮ್ಮ ಮೂಳೆಗಳು ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧ ಕೆಲಸ ಮಾಡಬೇಕಾಗುತ್ತದೆ. ಈ ಸಣ್ಣ ಪ್ರಯತ್ನವು ನಿಮ್ಮ ಮೂಳೆಗಳಿಗೆ ಅತ್ಯಂತ ದೊಡ್ಡ ವ್ಯಾಯಾಮ ನೀಡಿದಂತೆ!
ನಿಯಮಿತ ವಾಕಿಂಗ್ ಅಭ್ಯಾಸವು ಮೂಳೆ ಸಾಂದ್ರತೆಯನ್ನು (Bone Density) ಗಮನಾರ್ಹವಾಗಿ ಸುಧಾರಿಸುತ್ತದೆ. ಇದರಿಂದ ನೀವು ವಯಸ್ಸಾದಂತೆ ಎದುರಾಗುವ ಆಸ್ಟಿಯೊಪೊರೋಸಿಸ್ (ಮೂಳೆ ಸವೆತ) ಮತ್ತು ಮುರಿತಗಳ ಅಪಾಯವು ಕಡಿಮೆಯಾಗುತ್ತದೆ. ಬಲವಾದ ಮತ್ತು ದೃಢವಾದ ಅಸ್ಥಿಪಂಜರಕ್ಕಾಗಿ (Skeleton) ವಾಕಿಂಗ್ ಅನ್ನು ನಿಮ್ಮ ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳಿ.
ಹೊಟ್ಟೆಯ ಕೊಬ್ಬನ್ನು ಕರಗಿಸಿ
ಇತ್ತೀಚಿನ ದಿನಗಳಲ್ಲಿ ಯುವಕರಿಗೂ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬು (Belly Fat) ಕೂಡ ಒಂದು. ಈ ಬೊಜ್ಜು ಕರಗಿಸಲು ಅನೇಕ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಆದರೆ, ಇದಕ್ಕೆ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವೆಂದರೆ ನಿಯಮಿತ ವಾಕಿಂಗ್!
ಸರಿಯಾದ ರೀತಿಯಲ್ಲಿ, ಅಂದರೆ, ಚುರುಕಾದ ವಾಕಿಂಗ್ (Brisk Walking) ಮಾಡುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕ್ರಮೇಣ ಕರಗುತ್ತದೆ. ಇದು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಿ, ಕೆಲವೇ ದಿನಗಳಲ್ಲಿ ನಿಮ್ಮ ದೇಹಕ್ಕೆ ಬಲ ಮತ್ತು ಒಟ್ಟಾರೆ ಫಿಟ್‌ನೆಸ್ ಹೆಚ್ಚಾಗಲು ಸಹಾಯ ಮಾಡುತ್ತದೆ.
ನಿರಂತರವಾಗಿ ವಾಕಿಂಗ್ ಮಾಡುವುದರಿಂದ ಕೇವಲ ಹೊಟ್ಟೆ ಮಾತ್ರವಲ್ಲ, ಭುಜಗಳು ಮತ್ತು ಕಾಲುಗಳು ಸೇರಿದಂತೆ ದೇಹದ ಎಲ್ಲಾ ಸ್ನಾಯುಗಳು ಆರೋಗ್ಯಕರವಾಗಿರುತ್ತವೆ. ಅಷ್ಟೇ ಅಲ್ಲದೆ, ತೀವ್ರ ಆಯಾಸದಿಂದ ಬಳಲುವವರು ನಿತ್ಯ ವಾಕಿಂಗ್ ಮಾಡುವ ಮೂಲಕ ಚೈತನ್ಯಶೀಲರಾಗಿ, ದಿನವಿಡೀ ಹೆಚ್ಚು ಸಕ್ರಿಯವಾಗಿರಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಪ್ರತಿದಿನ ಮೊಸರು ಸೇವಿಸಿದರೆ ಏನೆಲ್ಲಾ ಆಗುತ್ತೆ? ತಿಳಿದುಕೊಳ್ಳಲೇಬೇಕಾದ ಮೊಸರಿನ ಅಗಾಧ ಶಕ್ತಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


