ಬೆಂಗಳೂರು: ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯಿಂದ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದ ತಾಯಿ ಹಾಗೂ ಮಗಳ ಜೋಡಿ ಬೇಡದ ವಿಷಯಕ್ಕೆ ಸುದ್ದಿಗೀಡಾಗಿದೆ. ಸದಾ ದೇವರ ಜಪ ಮಾಡುತ್ತಿದ್ದ ತಾಯಿ ತನ್ನ ಮಗಳ ಮೇಲೆ ಮಚ್ಚು ಬೀಸಿದ ಆಘಾತಕಾರಿ ಘಟನೆ ನಡೆದಿದೆ.
ಹೌದು, ನಗರದ ಸಂಪಿಗೆಹಳ್ಳಿಯ ಅಗ್ರಹಾರ ಲೇಔಟ್‌ನ ಹರಿಹರೇಶ್ವರ ದೇವಾಲಯಕ್ಕೆ ತಾಯಿ ಸುಜಾತಾ ಹಾಗೂ ಆಕೆಯ 22 ವರ್ಷದ ಮಗಳು ರಮ್ಯಾ ಆಗಾಗ ಬರುತ್ತಿದ್ದರು. ಮದುವೆಯಾಗಿ ಆನೇಕಲ್‌ನಲ್ಲಿ ತನ್ನ ಪತಿ ಜತೆ ವಾಸವಿದ್ದ ರಮ್ಯಾ ಆಗಾಗ ಸಂಪಿಗೆಹಳ್ಳಿಯ ತನ್ನ ತವರು ಮನೆಗೆ ಬರುತ್ತಿದ್ದರು.
ಹೀಗೆ ತವರು ಮನೆಗೆ ಬಂದಾಗಲೆಲ್ಲ ತಾಯಿ ಹಾಗೂ ಮಗಳು ದೇವಾಲಯಕ್ಕೆ ತೆರಳುವುದು ವಾಡಿಕೆಯಾಗಿತ್ತು. ಅದರಂತೆ ನಿನ್ನೆ ( ನವೆಂಬರ್ 19 ) ಬೆಳಗ್ಗೆ 4 ಗಂಟೆಗೆ ಇಬ್ಬರೂ ಸಹ ಹರಿಹರೇಶ್ವರ ದೇವಾಲಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಎಂದಿನಂತೆ ದೇವಾಲಯವನ್ನೊಂದು ಸುತ್ತು ಹಾಕಿದ ಬಳಿಕ ಮಗಳು ರಮ್ಯಾ ಭಕ್ತಿಯಿಂದ ದೇವರಿಗೆ ನಮಸ್ಕರಿಸಲೆಂದು ತಲೆ ಬಾಗಿದ್ದಾರೆ. ಇದೇ ಸಮಯಕ್ಕೆ ಮಚ್ಚು ತೆಗೆದ ತಾಯಿ ರಮ್ಯಾ ತಲೆಗೆ ಮಚ್ಚು ಬೀಸಿದ್ದಾರೆ.
ಮಗಳು ಚೀರಿಕೊಂಡು ಕೆಳಗೆ ಬೀಳುತ್ತಿದ್ದಂತೆ ತಾಯಿ ಸುಜಾತಾ ಅಲ್ಲಿಂದ ಓಡಿಹೋಗಿದ್ದಾರೆ. ಹೀಗೆ ಹಲ್ಲೆಗೊಳಗಾಗಿ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ರಮ್ಯಾಳನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಡೆಯುತ್ತಿದೆ. ಇನ್ನು ತಾಯಿ ಸುಜಾತಾ ದೇವಾಲಯಕ್ಕೆ ಮಗಳ ಜತೆ ಬರುವಾಗಲೇ ಮಚ್ಚನ್ನು ತನ್ನ ಜತೆ ತಂದದ್ದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ತಾಯಿಯನ್ನು ಬಂಧಿಸಿದ ಸಂಪಿಗೆಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದು, ಈ ಕೃತ್ಯಕ್ಕೆ ನಿಖರ ಕಾರಣವೇನೆಂಬುದು ತಿಳಿದುಬರಬೇಕಿದೆ.
ಜೆಡಿಎಸ್ ಪಕ್ಷಕ್ಕೆ 25 ವರ್ಷ: ಬೆಳ್ಳಿಹಬ್ಬ ಆಚರಣೆಗೆ ನಿರ್ಧಾರ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


