ಆಶಸ್.. ಈ ಹೆಸರು ಕೇಳಿದಾಕ್ಷಣ ಪ್ರತಿಯೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿಯ ಪ್ರತಿಕ್ರಿಯೆಯೂ ʼಮದರ್ ಆಫ್ ಆಲ್ ಕ್ರಿಕೆಟ್ ಸೀರೀಸ್ʼ, ʼರಿಯಲ್ ಕ್ರಿಕೆಟ್ʼ ಎಂದೇ ಇರಲಿದೆ. ಇತ್ತೀಚೆಗೆ ಕ್ರಿಕೆಟ್ ನೋಡಲು ಆರಂಭಿಸಿದ ಕ್ರಿಕೆಟ್ ಪ್ರಿಯರು ಯಾವುದೇ ದೇಶಗಳ ನಡುವಿನ ಹಣಾಹಣಿಯೇ ಗ್ರೇಟ್ ಎಂದರೂ ಅವು ಯಾವುವೂ ಆಶಸ್ ಹತ್ತಿರಕ್ಕೂ ಸಹ ಬರುವುದಿಲ್ಲ.
ಕ್ರಿಕೆಟ್‌ನಲ್ಲಿ ಎರಡು ತಂಡಗಳ ನಡುವೆ ಈ ಸರಣಿಯಲ್ಲಿರುವಷ್ಟು ಹೋರಾಟ, ಗೆಲ್ಲಲೇಬೇಕೆಂಬ ಅತಿರೇಕದ ಹಠ, ದ್ವೇಷ ಇನ್ಯಾವ ಸರಣಿಯಲ್ಲೂ ಇರುವುದಿಲ್ಲ. ಆಶಸ್ ಎಂದರೆ ಕೇವಲ ಒಂದು ಸರಣಿಯಲ್ಲ, ಅದೊಂದು ಗೌರವದ ಪ್ರತೀಕ, ಪ್ರತಿಷ್ಠೆಯ ಯುದ್ಧ. ಹೀಗಾಗಿಯೇ ಆಟಗಾರರು ವಿಶ್ವಕಪ್‌ಗಿಂತ ಆಶಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ, ಕಷ್ಟಕರ ಎಸೆತಗಳು ಮುಖಕ್ಕೆ ತಾಕಿ ರಕ್ತ ಹರಿದರೂ ಛಲ ಬಿಡದೇ ಆಟವಾಡುತ್ತೇನೆ ಎನ್ನುತ್ತಾರೆ.
ಹೀಗೆ ಇಷ್ಟರ ಮಟ್ಟಕ್ಕೆ ಈ ಒಂದು ಸರಣಿ ಹೆಸರು ಮಾಡಲು ಕಾರಣವೇನು ಎಂದು ಹುಡುಕುತ್ತಾ ಹೋದರೆ ಇದರ ಆರಂಭವಾಗುವುದಕ್ಕೆ ಕಾರಣ ಸಿಗುವುದು 1882ರಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ ಓವಲ್‌ನಲ್ಲಿ ನಡೆದ ಆ ಒಂದು ಪಂದ್ಯ.
1882ರ ಆಗಸ್ಟ್ 28 ಹಾಗೂ 29ರಂದು ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಅದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಗೆದ್ದುಬೀಗಿತ್ತು. ಅಂದಹಾಗೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಊಹಿಸಿದ್ದರು. ಕಾರಣ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೇವಲ 63 ರನ್‌ಗೆ ಆಲ್‌ಔಟ್ ಆಗಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 101 ರನ್ ಕಲೆಹಾಕಿ 38 ರನ್‌ಗಳ ಮುನ್ನಡೆಯನ್ನು ಸಾಧಿಸಿತ್ತು. ಬಳಿಕ ಆಸ್ಟ್ರೇಲಿಯಾ 122 ರನ್ ಬಾರಿಸಿ 84 ರನ್‌ಗಳ ಮುನ್ನಡೆ ಕಾಯ್ದುಕೊಂಡು ಇಂಗ್ಲೆಂಡ್‌ಗೆ 85 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಇಂಗ್ಲೆಂಡ್ 77 ರನ್‌ಗೆ ಆಲ್‌ಔಟ್ ಆಗಿ 7 ರನ್‌ಗಳ ಸೋಲನ್ನು ಕಂಡಿತು.
ಹೀಗೆ ಪಂದ್ಯ ಆರಂಭವಾಗುವ ಮುನ್ನ ಗೆಲ್ಲುವ ಫೇವರಿಟ್ ಎನಿಸಿಕೊಂಡು, ಮೊದಲ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿ ಗೆಲುವಿನತ್ತ ಸಾಗಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ನೆಲಕಚ್ಚಿತು. ಹೀಗೆ ಇಂಗ್ಲೆಂಡ್ ಸೋತದ್ದನ್ನು ದ ಸ್ಪೋರ್ಟಿಂಗ್ ಟೈಮ್ಸ್ ಎಂಬ ದಿನಪತ್ರಿಕೆ ತನ್ನ ಪತ್ರಿಕೆಯಲ್ಲಿ ಶ್ರದ್ಧಾಂಜಲಿ ಎಂದು ಪ್ರಕಟಿಸಿತ್ತು. ಆಗಸ್ಟ್ 29, 1882ರಂದು ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾವನ್ನಪ್ಪಿದ್ದು, ದೇಹವನ್ನು ಸುಟ್ಟು ಅಸ್ತಿಯನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಈ ಶ್ರದ್ಧಾಂಜಲಿಯಲ್ಲಿ ಬರೆಯಲಾಗಿತ್ತು.
ಈ ಬೃಹತ್ ಅವಮಾನದ ಬಳಿಕ ಅದೇ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡ ಇಂಗ್ಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿ ಮೊದಲ ಪಂದ್ಯ ಸೋತು ನಂತರ ನಡೆದ ಎರಡು ಪಂದ್ಯಗಳನ್ನು ಗೆದ್ದು ಸರಣಿ ಗೆಲುವು ಸಾಧಿಸಿತು. ಈ ಸರಣಿಗೂ ಮುನ್ನ ಇಂಗ್ಲೆಂಡ್ ನಾಯಕ ಇವೊ ಬ್ಲಿಫ್ ಅಸ್ತಿಯನ್ನು ಮತ್ತೆ ತರುತ್ತೇವೆ ಎಂದು ಹೇಳಿದ್ದರು. ಅದರಂತೆ ಪಂದ್ಯವನ್ನು ಗೆದ್ದರು.
ಹೀಗೆ ಪತ್ರಿಕೆಯೊಂದು ಪ್ರಕಟಿಸಿದ ಶ್ರದ್ಧಾಂಜಲಿ ಪ್ರಕಟಣೆಗೆ ಇಂಗ್ಲೆಂಡ್ ನಾಯಕ ಇವೊ ಬ್ಲಿಫ್ ಪ್ರತಿಕ್ರಿಯಿಸಿದ್ದರಿಂದ ಆಶಸ್ ಹೆಸರು ಜಾರಿಗೆ ಬಂತು. ಅಲ್ಲದೇ ಮೆಲ್ಬೋರ್ನ್‌ನ ಯುವತಿಯರ ಗುಂಪು ಗೆದ್ದ ಇಂಗ್ಲೆಂಡ್ ತಂಡದ ನಾಯಕನಿಗೆ ಕ್ರಿಕೆಟ್‌ನ ಬೆಲ್ಸ್ ಸುಟ್ಟ ಬೂದಿಯನ್ನು ಒಂದು ಸಣ್ಣ ಕಪ್‌ಗೆ ಹಾಕಿ ನೀಡಿದ್ದರು. ಅದನ್ನು ಬ್ಲಿಫ್ ಇಂಗ್ಲೆಂಡ್‌ಗೆ ಕೊಂಡೊಯ್ದರು. ಹೀಗೆ ಆಶಸ್ ಕಪ್ ಉಗಮವಾಯಿತು. ಸದ್ಯಕ್ಕೆ ಆ ನಿಜವಾದ ಆಶಸ್ ಕಪ್ ಅನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಡಲಾಗಿದ್ದು, ಅದೇ ಆಕಾರದ ಬೇರೆ ಟ್ರೋಫಿಯನ್ನು ಗೆದ್ದ ತಂಡಕ್ಕೆ ನೀಡಲಾಗುತ್ತಿದೆ.
ನಾಳೆಯಿಂದ ( ನವೆಂಬರ್ 21 ) ಆಶಸ್ ಸರಣಿ ಆರಂಭವಾಗುತ್ತಿದ್ದು, 5 ಪಂದ್ಯಗಳ ಸರಣಿ ಜನವರಿ 4ರವರೆಗೆ ನಡೆಯಲಿದೆ.
18 ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಂದ ಮೂವರು ಬಾಲಕರ ಬಂಧನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


