ಬೆಂಗಳೂರು ನಗರವನ್ನು ಬೆಚ್ಚಿಬೀಳಿಸಿದ್ದ ಎಟಿಎಂಗೆ ಹಣ ತುಂಬುವ ವಾಹನ ದರೋಡೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಕೃತ್ಯಕ್ಕೆ ಬಳಕೆ ಮಾಡಲಾಗಿದ್ದ, ನಕಲಿ ನಂಬರ್ ಪ್ಲೇಟ್ ಹೊಂದಿದ್ದ ವಾಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣ ಇದಾಗಿದೆ. 7 ಕೋಟಿ 11 ಲಕ್ಷ ಹಣವನ್ನು ಹಾಡಹಗಲೇ ದರೋಡೆ ಮಾಡಿಕೊಂಡು ಹೋದ ಘಟನೆ ಬುಧವಾರ ಮಧ್ಯಾಹ್ನ ನಡೆದಿತ್ತು.
ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ತನಿಖೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಗುರುವಾರ ಕೃತ್ಯಕ್ಕೆ ಬಳಕೆ ಮಾಡಿದ್ದ ಇನ್ನೋವಾ ಕಾರನ್ನು ಪತ್ತೆ ಹಚ್ಚಿದ್ದಾರೆ.
ತಿರುಪತಿಯಲ್ಲಿ ಪತ್ತೆ: ದರೋಡೆಗೆ ಬಳಕೆ ಮಾಡಿರುವ ಕಪ್ಪು ಬಣ್ಣದ ಇನ್ನೋವಾ ಕಾರು ತಿರುಪತಿಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳು ಕಾರನ್ನು ಬಿಟ್ಟು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಈ ದರೋಡೆ ಪ್ರಕರಣದಲ್ಲಿ ಅಂತರರಾಜ್ಯ ದರೋಡೆಕೋರರ ಗುಂಪು ಪಾಲ್ಗೊಂಡಿದೆಯೇ? ಎಂಬ ಕುರಿತು ಅನುಮಾನ ವ್ಯಕ್ತವಾಗಿದೆ. ಬೆಂಗಳೂರು ನಗರದ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಎಟಿಎಂಗೆ ಹಣ ಹಾಕುವ ವಾಹನದಿಂದ ಇನ್ನೋವಾ ಕಾರಿಗೆ ಹಣ ತುಂಬಿದ ಬಾಕ್ಸ್‌ಗಳನ್ನು ಹಾಕಿಕೊಂಡು ದರೋಡೆಕೋರರು ಪರಾರಿಯಾಗಿದ್ದರು.
ಚಾಮರಾಜನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿಗಳ ಸುಳಿವು ಸಿಕ್ಕಿದೆ. ಅವರು ಬಳಕೆ ಮಾಡಿದ್ದ ಕಾರು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಸಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಹಾಕಿ, ಅದರ ಮೇಲೆ ರಿಸರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬಾಣಸವಾಡಿಯಲ್ಲಿ ಸ್ಟಿಕ್ಕರ್ ಹಾಕಿಸಲಾಗಿದೆ ಎಂಬ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಎಟಿಎಂಗೆ ಹಣ ತುಂಬುವ ವಾಹನದ ಚಾಲಕ, ಇಬ್ಬರು ಭದ್ರತಾ ಸಿಬ್ಭಂದಿ ಮತ್ತು ವಾಹನದಲ್ಲಿದ್ದ ಇನ್ನೊಬ್ಬ ಸಿಬ್ಬಂದಿಗೂ ದರೋಡೆಕೋರರಿಗೂ ಸಂಬಂಧವಿದೆಯೇ? ಎಂಬ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, “ನವೆಂಬರ್ 19ರಂದು ಬೆಂಗಳೂರಿನಲ್ಲಿ ನಡೆದ ರೂ. 7.11 ಕೋಟಿ ನಗದು ದರೋಡೆಗೆ ಸಂಬಂಧಿಸಿದವರು ದರೋಡೆ ನಂತರ ವಾಹನಗಳನ್ನು ಬದಲಾಯಿಸಿ ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸಿದ್ದರು. ಇದರಿಂದ ತನಿಖೆ ಇನ್ನಷ್ಟು ಕಷ್ಟಕರವಾಗಿದೆ” ಎಂದು ಹೇಳಿದ್ದಾರೆ.
“ಅವರು ಪರಾಗಿಯಾಗುವ ವೇಳೆ ಯಾವ ವಾಹನವನ್ನು ಬಳಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಹನಗಳನ್ನು ಬದಲಾಯಿಸಿ ಹಣವನ್ನು ಸ್ಥಳಾಂತರಿಸಿದ್ದಾರೆ ಎಂಬುದು ಪರಿಶೀಲನೆಯಾಗಿದೆ. ಈ ವಾಹನ ಕರ್ನಾಟಕವನ್ನು ಬಿಟ್ಟಿದೆಯೇ? ಎಂಬುದನ್ನು ತನಿಖೆಯಿಂದ ತಿಳಿದುಕೊಳ್ಳಲಾಗುತ್ತಿದೆ” ಎಂದರು.
“ದರೋಡೆಗೆ ಬಳಸಿದ ಒಂದು ವಾಹನ ಇನ್ನೋವಾಗೆ ಹಾಕಿದ್ದ ನಂಬರ್ ಪ್ಲೇಟ್ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನದ್ದಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
ದರೋಡೆ ಮಾಡಿರುವ ಆರೋಪಿಗಳು ಬೆಂಗಳೂರು ನಗರ ಬಿಟ್ಟು ಪರಾರಿಯಾಗಿರುವುದು ಈಗ ಖಚಿತವಾಗಿದೆ. ಬೇರೆ ರಾಜ್ಯಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದಿಂದ ತನಿಖೆಯನ್ನು ಮುಂದುವರೆಸಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


