ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷವನ್ನು ನವೆಂಬರ್ 20ಕ್ಕೆ ಪೂರ್ಣಗೊಳಿಸಿದೆ. 2023ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿದೆ. ಇತ್ತ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿದೆ. ಹೌದು ರಾಜ್ಯದ ಒಟ್ಟು 42 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯಿತಿಗಳ ಅವಧಿ ಮುಕ್ತಾಯಗೊಂಡಿದೆ. ಈಗ ಅವುಗಳಿಗೆ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸುತ್ತಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವಾರ್ಡ್‌ಗಳ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯುತ್ತಿದೆ. ಮೀಸಲಾತಿ ಅಂತಿಮಗೊಳಿಸಿದ ಬಳಿಕ ರಾಜ್ಯ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಲಿದೆ. ರಾಜ್ಯ ಸರ್ಕಾರದ ಆಡಳಿತ ಹೇಗಿದೆ? ಎಂದು ತಿಳಿಯಲು ಈ ಚುನಾವಣೆ ಒಂದು ಮಾಪನವಾಗಲಿದೆ.
ಅಧಿಸೂಚನೆ ಮೂಲಕ ಮಾಹಿತಿ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಾವಧಿ ಈಗಾಗಲೇ ಮುಕ್ತಾಯಗೊಂಡಿದ್ದು ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶ ಅನ್ವಯ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ ಚುನಾವಣೆ ನಡೆಸಬೇಕಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ.ಮಂಜುನಾಥ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಎಂಎ-1&3) ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮದ ಕಲಂ 11ರ ಉಪ ಕಲಂ (2) (3) (4) ಹಾಗೂ ಕಲಂ 42 (2ಎ) ರನ್ವಯ ಮತ್ತು ಸರ್ಕಾರದ ಮಾರ್ಗಸೂಚಿ ಸಂಖ್ಯೆ: ನಅಇ 65 ಎಂಎಲ್‌ಆರ್ 2020, ದಿನಾಂಕ 11-09-2020 ರಲ್ಲಿ ಸ್ಪಷ್ಟಪಡಿಸಿರುವಂತೆ ರಾಜ್ಯದಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ವಿವಿಧ ಪವರ್ಗಗಳ ಮೀಸಲಾತಿಯನ್ನು 9ನೇ ಅವಧಿಗೆ ನಿಗದಿಪಡಿಸಿ ಸರ್ಕಾರ ದಿನಾಂಕ 08-10-2020 ರಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ಆದೇಶವನ್ನು ಪ್ರಶ್ನಿಸಿ ಆರ್.ಬಸವರಾಜು ಚನ್ನಗಿರಿ ಅವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದ್ದು, ನ್ಯಾಯಾಲಯವು ಈ ರಿಟ್ ಅರ್ಜಿ ಹಾಗೂ ಇದೇ ರೀತಿ ದಾಖಲಾಗಿದ್ದ ಇತರೆ ರಿಟ್ ಪ್ರಕರಣಗಳನ್ನು ಸೇರ್ಪಡೆಗೊಳಿಸಿ ದಿನಾಂಕ 08-10-2020ರ ಅಧಿಸೂಚನೆಗೆ ತಡೆಯಾಜ್ಞೆ ನೀಡಿರುತ್ತದೆ. ತಡೆಯಾಜ್ಞೆಯನ್ನು ಪ್ರಶ್ನಿಸಿ, ಸರ್ಕಾರದಿಂದ ರಿಟ್ ದಾಖಲಿಸಲಾಗಿತ್ತು. ರಿಟ್ ಅಪೀಲು ಪ್ರಕರಣದಲ್ಲಿ ನ್ಯಾಯಾಲಯವು ದಿನಾಂಕ 21-10-2020 ರಂದು ಮಧ್ಯಂತರ ಆದೇಶ ನೀಡಿದೆ. ದಿನಾಂಕ 08-10-2020 ರ ಅಧಿಸೂಚನೆಯಂತೆ ರಾಜ್ಯದಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗಳನ್ನು ದಿನಾಂಕ 02-11-2020 ರೊಳಗಾಗಿ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುತ್ತದೆ ಹಾಗೂ ದಿನಾಂಕ 05-11-2020 ರಂದು ಸರ್ಕಾರದ ಮೇಲ್ಮನವಿಯನ್ನು ಪರಿಗಣಿಸಿ ವಿಲೇಮಾಡಿರುತ್ತದೆ.
ಮಾನ್ಯ ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಾಂಕ 08-10-2020ರ ಅಧಿಸೂಚನೆಯನ್ನು ಅನುಸರಿಸಿ ರಾಜ್ಯದಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ 9ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗಳನ್ನು ಜರುಗಿಸಲಾಗಿರುತ್ತದೆ. ನ್ಯಾಯಾಲಯವು ದಿನಾಂಕ 19-11-2020ರ ಆದೇಶದಲ್ಲಿ ರಿಟ್ ಅರ್ಜಿ ಅಂಗೀಕರಿಸಿ, ಸರ್ಕಾರದ ಆದೇಶ ದಿನಾಂಕ 08-10-2020 ಅನ್ನು ವಜಾಗೊಳಿಸಿದ್ದು, ಈ ಆದೇಶದ ವಿರುದ್ಧ ಸರ್ಕಾರದಿಂದ ರಿಟ್ ಅಪೀಲು ದಾಖಲಿಸಿದ್ದು, ನ್ಯಾಯಾಲಯವು ದಿನಾಂಕ 21-04-2021 ರಂದು ನೀಡಿರುವ ಆದೇಶದಲ್ಲಿ ಏಕಸದಸ್ಯ ಪೀಠದ ಆದೇಶವನ್ನು ವಜಾಗೊಳಿಸಿ ಆದೇಶಿಸಿರುತ್ತದೆ.
ರಿಟ್ ಅಪೀಲು ಪ್ರಕರಣದಲ್ಲಿ ನೀಡಲಾದ ತೀರ್ಪಿನ ವಿರುದ್ಧ ಚಂದ್ರೇಗೌಡ, ಹೆಚ್.ವಿ, ಮತ್ತಿತರರು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯ ಹಂತದಲ್ಲಿರುವಾಗ ಮಾನ್ಯ ನ್ಯಾಯಾಲಯದ ಆದೇಶದಂತೆ NIC ರವರು software ಮೂಲಕ ಸಿದ್ಧಪಡಿಸಿ ಸಲ್ಲಿಸಿದ ನಗರಸಭೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಮೀಸಲಾತಿ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ.
ನ್ಯಾಯಾಲಯವು ದಿನಾಂಕ 13-12-2022ರಂದು ನೀಡಿರುವ ಆದೇಶದನ್ವಯ ರಾಜ್ಯದಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ 10ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಿ ದಿನಾಂಕ 05-08-2024ರಂದು ಆದೇಶ ಹೊರಡಿಸಲಾಗಿದೆ. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಮುಂದೆ ಪ್ರಕರಣಗಳನ್ನು ಬಾಕಿ ಇದ್ದುದರಿಂದ, 10ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸಲು ಸಾಧ್ಯವಾಗಿರುವುದಿಲ್ಲ. ಆದರಿಂದ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಕ್ಯಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವವರೆಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ, ಕರ್ನಾಟಕ ಪುರಸಭೆಗಳ ಕಾಯ್ದೆ, 1964 ರ ಕಲಂ-315 ರನ್ವಯ ರಾಜ್ಯದಲ್ಲಿರುವ ನಗರಸಭೆ, ಪುರಸಭ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ.
ದಿನಾಂಕ 05-08-2024 ರಂದು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನಗಳಿಗೆ 10ನೇ ಅವಧಿಗೆ ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚನೆಯನ್ನು ಹೊರಡಿಸಿದ ನಂತರ ಅದರಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನಗಳಿಗೆ 10ನೇ ಅವಧಿಯ ಚುನಾವಣೆಗಳು ಜರುಗಿಸಲಾಗಿರುತ್ತದೆ.
ಎಸ್.ಆರ್.ಮುರಳಿಗೌಡ ಮತ್ತಿತರರು, ಕೋಲಾರ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ದಾಖಲಿಸಿರುವ ರಿಟ್ ಅರ್ಜಿ ಹಾಗೂ ಇತರೆ ರಿಟ್ ಪ್ರಕರಣಗಳಲ್ಲಿ ಅರ್ಜಿದಾರರು ಆಡಳಿತಾಧಿಕಾರಿಗಳ ಅವಧಿಯನ್ನು ಹೊರತುಪಡಿಸಿ ಚುನಾಯಿತ ಆಡಳಿತ ಮಂಡಳಿಯ ಅವಧಿಯನ್ನು 5 ವರ್ಷಗಳಿಗೆ ಪರಿಗಣಿಸಿ, ವಿಸ್ತರಿಸುವಂತೆ ಕೋರಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ. ನ್ಯಾಯಾಲಯ ಈ ಅರ್ಜಿ ವಿಚಾರದಲ್ಲಿ ಮಧ್ಯಂತರ ಆದೇಶವನ್ನು ನೀಡಿದೆ.
ಪ್ರಸ್ತುತ ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಕೌನ್ಸಿಲ್ ಅವಧಿ ಮುಕ್ತಾಯವಾಗುತ್ತಿದೆ. ಆದ್ದರಿಂದ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ತನಕ ಅವುಗಳ ನಿತ್ಯದ ಕಾರ್ಯ ನಿರ್ವಹಣೆಗಾಗಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


