ಮೈಸೂರು: ಇಲ್ಲಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಕುರಿತು ನೀಡಿದ ಹೇಳಿಕೆ ವಿವಾದವನ್ನು ಎಬ್ಬಿಸಿದೆ.
ಸತ್ಯವನ್ನು ಹೇಳಲು ಹಿಂಜರಿಯಬಾರದು, ಯಕ್ಷಗಾನ ಕಲಾವಿದರು ಮೇಳಕ್ಕೆಂದು ಏಳೆಂಟು ತಿಂಗಳು ಊರಿಂದ ಊರಿಗೆ ತಿರುಗುತ್ತಲೇ ಇದ್ದ ಕಾರಣ ಅವರಿಗೆ ಯಾರೂ ಹೆಣ್ಣು ನೀಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿ ಒತ್ತಡದಲ್ಲಿರುತ್ತಿದ್ದರು. ಇತರರಿಗೆ ಅವರ ಮೇಲೆ ಮೋಹವೇ ಇರುತ್ತಿತ್ತು. ಒಂದುವೇಳೆ ಸ್ತ್ರೀವೇಷಧಾರಿಗಳು ಸಲಿಂಗಕಾಮವನ್ನು ನಿರಾಕರಿಸಿದರೆ ಮರುದಿನ ಅವರಿಗೆ ಭಾಗವತರು ಪದ್ಯವನ್ನೇ ನೀಡುತ್ತಿರಲಿಲ್ಲ. ಈ ಮೂಲಕ ಅವರ ಮೇಲೆ ಸೇಡನ್ನು ತೀರಿಸಿಕೊಳ್ಳಲಾಗುತ್ತಿತ್ತು ಎಂದು ಬಿಳಿಮಲೆ ಹೇಳಿದ್ದರು.
ಈ ಹೇಳಿಕೆ ಭಾರೀ ವಿವಾದವನ್ನು ಎಬ್ಬಿಸಿದ್ದು, ಈ ಕುರಿತು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಡುಪಿಯಲ್ಲಿ ಮಾತನಾಡಿ ಖಂಡಿಸಿದ್ದರು. ಸ್ವತಃ ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸರಾಗಿರುವ ಬಿಳಿಮಲೆಯವರು ಈ ಮಾತು ಹೇಳಬಾರದಿತ್ತು ಎಂದು ಹೇಳಿದ್ದರು.
ಇನ್ನು ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸಹ ಮಾತನಾಡಿದ್ದು, ಕೂಡಲೇ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಎಂದು ಆಗ್ರಹಿಸಿದ್ದರು. ಇದರು ಕೇವಲ ಯಕ್ಷಗಾನ ಕಲಾವಿದರಿಗೆ ಮಾಡಿದ ಅವಮಾನವಲ್ಲ, ಇಡೀ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ ಎಂದಿದ್ದರು.
ಹೀಗೆ ಭಾರೀ ವಿವಾದ ಎದ್ದ ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಪುರುಷೋತ್ತಮ ಬಿಳಿಮಲೆ ಯಾರನ್ನೂ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ, ನನ್ನ ಹೇಳಿಕೆಯಿಂದ ಬೇಸರವಾಗಿದ್ದಾರೆ ಕ್ಷಮೆ ಕೇಳುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಸಲಿಂಗಕಾಮ ಈಗ ಇಲ್ಲ, 60-70ರ ದಶಕದಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಕಂಡಿದ್ದನ್ನು ಹೇಳಿದ್ದೇನೆ, ಯಾರನ್ನೂ ನೋಯಿಸುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಲಿಲ್ಲ ಎಂದರು.
ಇನ್ನು ಪ್ರಜಾವಾಣಿ ಜತೆ ಮಾತನಾಡಿರುವ ಬಿಳಿಮಲೆ ʼಯಕ್ಷಗಾನ ಕಲಾವಿದರ ಸ್ಥಿತಿಯ ಬಗ್ಗೆ ಆಡಿದ ಮಾತಿಗೆ ನಾನು ಬದ್ಧ. ಯಕ್ಷಗಾನ ಪರಿಣಿತರು ಈ ಬಗ್ಗೆ ಪ್ರಶ್ನಿಸಿದರೆ ಉತ್ತರಿಸಲು ನಾನು ಸಿದ್ಧ. ಆದರೆ ನಿನ್ನೆಯಿಂದ ಹಲವು ಕಲಾವಿದರು ನನಗೆ ಕರೆ ಮಾಡುತ್ತಿದ್ದು, ನೀವು ಹೇಳಿದ್ದು ಸತ್ಯ ಎಂದು ನನ್ನ ಮಾತನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆʼ ಎಂದು ಪ್ರಜಾವಾಣಿ ಪ್ರಕಟಿಸಿದೆ.
ಫಿಟ್ ಮತ್ತು ಫೈನ್ ಆಗಿರಲು ಪ್ರತಿದಿನ ಎಷ್ಟು ಹೊತ್ತು ನಡೆಯಬೇಕು? ದೇಹಕ್ಕೆ ಸಿಗುವ ಸೂಪರ್ ಪ್ರಯೋಜನಗಳು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


