Friday, March 20, 2026
spot_img
More
    spot_img
    HomeJobsಹೊರ ಗುತ್ತಿಗೆ ನೌಕರರ ಸೇವೆ: ಇಲಾಖೆಗಳಿಗೆ ಮಹತ್ವದ ಪತ್ರ

    ಹೊರ ಗುತ್ತಿಗೆ ನೌಕರರ ಸೇವೆ: ಇಲಾಖೆಗಳಿಗೆ ಮಹತ್ವದ ಪತ್ರ

    ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ ಎಂಬುದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಕ್ತಾಯಗೊಂಡ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿ  2,84,881 ಹುದ್ದೆಗಳು ಖಾಲಿ ಇವೆ ಎಂದು ಸದನಕ್ಕೆ ಲಿಖಿತ ಉತ್ತರವನ್ನು ನೀಡಲಾಗಿದೆ.

    ಸರ್ಕಾರದ ವಿವಿಧ ಇಲಾಖೆ/ ನಿಗಮ/ ಮಂಡಳಿ/ ಸಂಸ್ಥೆಗಳಲ್ಲಿ ಖಾಯಂ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡದ ಕಾರಣ ಹೊರಗುತ್ತಿಗೆ ನೌಕರರ ಸೇವೆಯನ್ನು ಪಡೆಯಲಾಗುತ್ತಿದೆ. ಈಗ ಈ ಕುರಿತು ಎಲ್ಲಾ ಇಲಾಖೆಗಳಿಗೆ ಪತ್ರವೊಂದನ್ನು ಬರೆಯಲಾಗಿದೆ.

    ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಮೊಹಮ್ಮದ್ ಮೊಹಸಿನ್ ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ  ಸಲಹೆ/ ಅಭಿಪ್ರಾಯವನ್ನು ನೀಡುವಂತೆ ತಿಳಿಸಿದ್ದಾರೆ.

    ಪತ್ರದ ವಿವರಗಳು:  ಪತ್ರದಲ್ಲಿ ಸರ್ಕಾರದ ವಿವಿಧ ಇಲಾಖೆ/ ನಿಗಮ/ ಮಂಡಳಿ/ ಸಂಸ್ಥೆಗಳಲ್ಲಿ ಖಾಯಂ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡದೆ ಇರುವುದರಿಂದ ಹೊರಗುತ್ತಿಗೆ ನೌಕರರ ಸೇವೆಯನ್ನು ಖಾಸಗಿ ಏಜೆನ್ಸಿಗಳ ಮೂಲಕ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.

    ಸದರಿ ಏಜೆನ್ಸಿಗಳು ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ, ESI, PF ಮೊತ್ತಗಳನ್ನು ನಿಗದಿತ ಅವಧಿಯಲ್ಲಿ ಪಾವತಿಸದಿರುವ ಬಗ್ಗೆ, ದೂರುಗಳು ಸ್ವೀಕೃತವಾದ ಮತ್ತು ಅವರಿಗೆ ಹುದ್ದೆಗೆ ಅವಶ್ಯವಿರುವ ಕೌಶಲ್ಯ ತರಬೇತಿಗಳನ್ನು ನೀಡದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ 2008ರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘ (ನಿಯಮಿತ)’ ಎಂಬ ಸಹಕಾರ ಸಂಘದ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಹಕಾರ ಸಂಘಗಳನ್ನು ಸಚಿವ ಸಂಪುಟದ ಅನುಮೋದನೆ ಪಡೆದು ಸ್ಥಾಪಿಸಲು ಉದ್ದೇಶಿಸಲಾಗಿತ್ತು.

    ಸದರಿ ಪ್ರಸ್ತಾವನೆ ಸಂಬಂಧ ರಚಿತವಾದ ಉಪ ಸಮಿತಿಯ ಶಿಫಾರಸ್ಸುಗಳೊಂದಿಗೆ ದಿನಾಂಕ 27.11.2025ರಂದು ನಡೆದ ಸಚಿವ ಸಂಪುಟ ಸಭೆಯ ಮುಂದೆ ಅನುಮೋದನೆಗೆ ಸಲ್ಲಿಸಿದ ಸಂದರ್ಭದಲ್ಲಿ ಮಾನ್ಯ ಸಚಿವ ಸಂಪುಟವು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಇಲಾಖೆಗಳ ಅಭಿಪ್ರಾಯ ಪಡೆದು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿರುತ್ತದೆ.

    ರಾಜ್ಯಾದ್ಯಂತ ಬೀದರ್ ಜಿಲ್ಲಾ ಸಹಕಾರ ಸಂಘದ ಮಾದರಿಯಲ್ಲಿ ಸ್ಥಾಪಿಸುವ ಸಂಬಂಧ ಮತ್ತು ಸದರಿ ಸಹಕಾರ ಸಂಘದ ಮೂಲಕ ಹೊರಗುತ್ತಿಗೆ ನೌಕರರ ಸೇವೆಯನ್ನು ಸರ್ಕಾರಿ ಸ್ವಾಮ್ಯದ ಕಚೇರಿ/ ನಿಗಮ/ ಮಂಡಳಿಗಳಿಗೆ ಒದಗಿಸುವ ಕುರಿತಂತೆ ತಮ್ಮ ಅಮೂಲ್ಯ ಸಲಹೆ/ ಅಭಿಪ್ರಾಯವನ್ನು 15 ದಿನಗಳೊಳಗಾಗಿ ಸಲ್ಲಿಸುವಂತೆ ಕೋರುತ್ತೇನೆ. 15 ದಿನಗಳೊಳಗಾಗಿ ತಮ್ಮ ಸಲಹೆ/ ಅಭಿಪ್ರಾಯವನ್ನು ಸಲ್ಲಿಸದಿದ್ದಲ್ಲಿ ತಮ್ಮ ಸಹಮತಿ ಇದೆಯೆಂದು ಭಾವಿಸಲಾಗುತ್ತದೆ ಎಂದು ಈ ಮೂಲಕ ತಮಗೆ ತಿಳಿಸಬಯಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

    ಕನಿಷ್ಠ ವೇತನ, ವಿವಿಧ ಸೌಲಭ್ಯ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯಗಳು ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ಮತ್ತಿತರ ಸೌಲಭ್ಯಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ಒದಗಿಸಬೇಕಿದೆ.

    ಹೊರಗುತ್ತಿಗೆ ನೌಕರರಿಗೆ ಶಾಸನಬದ್ಧ ಸೌಲಭ್ಯ ಹಾಗೂ ನಿಯಮಾವಳಿ ಪ್ರಕಾರ ಕನಿಷ್ಠ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಕೆಲವೆಡೆ ಹೊರಗುತ್ತಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಗುತ್ತಿಗೆದಾರರು ನೀಡುತ್ತಿಲ್ಲ ಎಂಬ ಆರೋಪಗಳಿವೆ.

    ಗುತ್ತಿಗೆದಾರರು ಸೇವಾಶುಲ್ಕವನ್ನು ಮಾತ್ರ ಕಡಿತ ಮಾಡಬೇಕು. ಉಳಿದಂತೆ ನೌಕರರಿಗೆ ದೊರಕಬೇಕಾದ ಸೌಲಭ್ಯ ಒದಗಿಸಬೇಕು. ಸೇವಾಶುಲ್ಕ ಹೊರತುಪಡಿಸಿ ಇತರೆ ಯಾವುದೇ ಅನಧಿಕೃತ ವೇತನ ಕಡಿತವನ್ನು ಮಾಡುವಂತಿಲ್ಲ. ನೌಕರರ ಬ್ಯಾಂಕ್ ಖಾತೆಗೆ ವೇತನವನ್ನು ಜಮಾ‌ ಮಾಡಬೇಕು. ಪ್ರತಿಯೊಬ್ಬ ಹೊರ ಗುತ್ತಿಗೆ ನೌಕರರು ಕಡ್ಡಾಯವಾಗಿ ಭವಿಷ್ಯ ನಿಧಿ, ಇ.ಎಸ್‌.ಐ ಮತ್ತಿತರ ಖಾತೆಗಳನ್ನು ಹೊಂದಿರುವುದನ್ನು ಕೂಡ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.

    ಹೊರ ಗುತ್ತಿಗೆ ನೌಕರರ ವೇತನವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವಂತೆ ಹೊರ ಗುತ್ತಿಗೆ ನೀಡಿರುವ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಪ್ರತಿ ತಿಂಗಳು 7 ಅಥವ 10ನೇ ತಾರೀಖಿನೊಳಗೆ ಬ್ಯಾಂಕ್ ಮೂಲಕ ಅವರ ಖಾತೆಗೆ ವೇತನ ಜಮೆ ಮಾಡಬೇಕು. ವೇತನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ವೇತನ ಪಾವತಿ ವಿಳಂಬಗೊಳಿಸಿದರೆ ಕಾನೂನು ಪ್ರಕಾರ ಕ್ರಮವನ್ನು ತೆಗೆದುಕೊಳ್ಳಬಹುದು.

    ಹೊರಗುತ್ತಿಗೆ ಕಾರ್ಮಿಕರಿಗೆ ಮೂಲ ವೇತನ ಹಾಗೂ ತುಟ್ಟಿಭತ್ಯೆಯನ್ನು ಪಾವತಿಸಬೇಕಾಗುತ್ತದೆ. ಈ ವೇತನದಲ್ಲಿ ಇಎಸ್ ಐ, ಪಿಎಫ್, ವೃತ್ತಿ ತೆರಿಗೆಯನ್ನು ಕಟಾಯಿಸಿ ನಿವ್ವಳ ವೇತನವನ್ನು ಪಾವತಿಸಬೇಕು. ಪ್ರತಿ ವರ್ಷ ಏಪ್ರಿಲ್‌ನಲ್ಲಿ ವೇತನವನ್ನು ಪರಿಷ್ಕರಣೆ ಮಾಡಿ ತುಟ್ಟಿ ಭತ್ಯೆಯನ್ನು ಸೇರಿಸಿ ವೇತನವನ್ನು ನೀಡಬೇಕು.

    ವೇತನ ವಿಳಂಬ ತಪ್ಪಿಸಲು ಕೆಲ ಷರತ್ತುಗಳನ್ನು ಟೆಂಡರ್ ದಾಖಲೆಗಳಲ್ಲಿ ನಮೂದಿಸಿರಬೇಕು. ಗುತ್ತಿಗೆದಾರ ವೇತನ ಪಾವತಿ ವಿಳಂಬ ಮಾಡಿದರೆ ಅಥವಾ ವೇತನವನ್ನು ಭಾಗಶಃ ಅಥವಾ ಪೂರ್ಣ ಪಾವತಿ ಮಾಡದಿದ್ದರೆ ಸಂಬಂಧಿಸಿದ ಇಲಾಖೆಯೇ ಇದಕ್ಕೆ ಹೊಣೆ.ಮಹಿಳೆ ಮತ್ತು ಪುರುಷ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವಾಗ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಯಾವುದೇ ಕಾರಣಕ್ಕೂ ವೇತನ ತಾರತಮ್ಯವನ್ನು ಮಾಡುವುದು ಕಾನೂನುಬಾಹಿರ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    KVS ಪ್ರವೇಶ 2026: ಅರ್ಜಿ ಪ್ರಕ್ರಿಯೆ ಶುರು!

    “KVS ಪ್ರವೇಶ 2026” ಇದೀಗ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) 2026-27 ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಆಸಕ್ತ ಪೋಷಕರು ಇದೀಗ...

    ಬ್ರೇಕಿಂಗ್! ದೆಹಲಿ EV ಪಾಲಿಸಿ 2.0: 2030ರವರೆಗೆ 100% ರೋಡ್ ಟ್ಯಾಕ್ಸ್ ಫ್ರೀ—₹1 ಲಕ್ಷವರೆಗೆ ಲಾಭ!

    “ದೆಹಲಿ EV ಪಾಲಿಸಿ 2.0” ಈಗ ದೇಶದ ವಾಹನ ಮಾರುಕಟ್ಟೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೆಹಲಿ ಸರ್ಕಾರ ಭರ್ಜರಿ ಸೌಲಭ್ಯಗಳನ್ನು ಘೋಷಿಸಿದ್ದು, ವಾಹನ ಖರೀದಿದಾರರಿಗೆ ದೊಡ್ಡ ಬೂಸ್ಟ್...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading