ಗುರುವಾರದಿಂದ ಕರ್ನಾಟಕದ ರಾಜಕೀಯದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರೈಸಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಪ್ರಾರಂಭವಾಗಿವೆ.
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ದೆಹಲಿಯಲ್ಲಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರ ದೆಹಲಿ ಭೇಟಿ ಕುರಿತು ಡಿ.ಕೆ.ಶಿವಕುಮಾರ್ ಮೌನ ಮುರಿದಿದ್ದಾರೆ.
ಶುಕ್ರವಾರ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿಯೇ ಇದ್ದಾರೆ. ಬೆಳಗ್ಗೆಯಿಂದ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಅವರ ನಿವಾಸಕ್ಕೆ ಕೆಲವು ಶಾಸಕರು, ನಾಯಕರು ಆಗಮಿಸಿದ್ದರು. ಸಹೋದರ ಡಿ.ಕೆ.ಸುರೇಶ್ ಸಹ ಆಗಮಿಸಿ ಕೆಲ ಹೊತ್ತು ಮಾತುಕತೆ ನಡೆಸಿದ್ದರು.
ಮೌನ ಮುರಿದ ಡಿಕೆಶಿ: ರಾಜಕೀಯ ಬೆಳವಣಿಗೆ ಕುರಿತು ಶುಕ್ರವಾರ ಮಧ್ಯಾಹ್ನ ಡಿ.ಕೆ.ಶಿವಕುಮಾರ್ ಮೌನ ಮುರಿದಿದ್ದಾರೆ. ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ.
“ಎಲ್ಲಾ 140 ಶಾಸಕರು ನನ್ನವರು. ಗುಂಪುಗಾರಿಕೆ ಮಾಡುವುದು ನನ್ನ ರಕ್ತದಲ್ಲಿಯೇ ಬಂದಿಲ್ಲ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
“ಮುಖ್ಯಮಂತ್ರಿಗಳು ಸಂಪುಟ ಪುನಾರಚನೆ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ಅವರು ದೆಹಲಿಯಲ್ಲಿರುವ ನಾಯಕರನ್ನು ಭೇಟಿ ಮಾಡುತ್ತಾರೆ. ಇದು ಸಹಜವಾಗಿದೆ. ಇದು ಅವರ ಹಕ್ಕು. ನಾವು ಅವರನ್ನು ತಡೆಯಲು ಸಾಧ್ಯವಿಲ್ಲ, ತಪ್ಪು ಎಂದು ಹೇಳಲು ಆಗದು” ಎಂದರು.
“ಮುಖ್ಯಮಂತ್ರಿಗಳು 5 ವರ್ಷವನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಅವರಿಗೆ ಶುಭಾಶಯಗಳನ್ನು ಹೇಳುತ್ತೇನೆ. ನಾವೆಲ್ಲರೂ ಅವರ ಜೊತೆ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ಮತ್ತು ನನಗೆ ಇನ್ನೂ ಸಮಯವಿದೆ. ನಾವು ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಮೈಸೂರಿನಲ್ಲಿ: ಶುಕ್ರವಾರ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದಾರೆ. ಬೆಳಗ್ಗೆ ಅವರು ಬೆಂಗಳೂರಿನಲ್ಲಿ ಮೆಕ್ಕೆಜೋಳ ಬೆಳೆಗಾರರ ಅಹವಾಲುಗಳು, ದಿಢೀರ್ ಬೆಲೆ ಇಳಿಕೆ ಹಾಗೂ ಖರೀದಿ ಕೇಂದ್ರ ತೆರೆಯುವ ಸಂಬಂಧ ಸಭೆಯನ್ನು ನಡೆಸಿದ್ದರು. ಈ ಸಭೆಯ ಬಳಿಕ ಅವರು ಮೈಸೂರಿಗೆ ತೆರಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಇನ್ನೂ 2 ಬಜೆಟ್ ಮಂಡಿಸುತ್ತೇನೆ. ನಿಮಗೆ ಯಾಕೆ ಅನುಮಾನ?, ಯಾಕೆ ಮತ್ತೆ ಅದನ್ನು ಕೇಳುತ್ತೀರಾ?, ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದೆಯೇ?, ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಎಲ್ಲದನ್ನು ತೀರ್ಮಾನ ಮಾಡುವುದು ಹೈಕಮಾಂಡ್” ಎಂದು ಸ್ಪಷ್ಟಪಡಿಸಿದರು.
“ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಮಾತನಾಡಿದೆಯೇ?, ಇಲ್ಲ ಎಂದ ಮೇಲೆ ಈಗೇಕೆ ಆ ಪ್ರಶ್ನೆ. ಹೈಕಮಾಂಡ್ ಹೇಳುವುದನ್ನು ನಾನು, ಶಾಸಕರು ಪಾಲಿಸಬೇಕು. ದೆಹಲಿಗೆ ಹೋಗಿರುವ ಸಚಿವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆ ಕೆಲಸಕ್ಕಾಗಿ ಹೋಗಿದ್ದೇನೆ ಎಂದು ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ?” ಎಂದು ಪ್ರಶ್ನಿಸಿದರು.
“ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇನೆ. ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಶಾಸಕರ ದೆಹಲಿ ಭೇಟಿ ಕುರಿತು ನಾನು ಯಾಕೆ ವಿವರಣೆ ಕೊಡಲಿ?. ನಾಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರಾಜ ಅರಸು ಮತ್ತು ಎಲ್.ಜಿ.ಹಾವನೂರು ಪ್ರಶಸ್ತಿಗಳನ್ನು ವಿತರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿಯೇ ಇದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಜೆ ಬೆಂಗಳೂರು ನಗರಕ್ಕೆ ಆಗಮಿಸಲಿದ್ದು, ಅವರು ಶನಿವಾರ ಸಹ ನಗರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


