ತಿರುಪತಿಯ ತಿರುಮಲ ದೇವಾಲಯಕ್ಕೆ ಭೇಟಿ ನೀಡುವುದು ಅಪಾರ ಭಕ್ತರ ಬಯಕೆ. ಅದರಲ್ಲಿಯೂ ಅಲ್ಲಿನ ಪ್ರಸಾದಕ್ಕೆ ಅದರದ್ದೇ ಆದ ಅಭಿಮಾನಿ ಬಳಗವಿದೆ ಹಾಗೂ ದೊಡ್ಡ ಮಟ್ಟದ ಗೌರವವಿದೆ. ದೇವಾಲಯಕ್ಕೆ ಭೇಟಿ ನೀಡದೇ ಇದ್ದರೂ ಅಲ್ಲಿಂದ ಬಂದ ಪ್ರಸಾದವೆಂದರೆ ಸಾಕು ಭಕ್ತಿಯಿಂದ ಹಾಗೂ ಪ್ರೀತಿಯಿಂದ ಸ್ವೀಕರಿಸುವ ಜನ ಅಪಾರ.
ಆದರೆ ಅದೇ ಪ್ರಸಾದ ವಿತರಣೆಯನ್ನು ಭಿಕ್ಷೆ ವಿತರಣೆ ಎಂದು ಉಲ್ಲೇಖಿಸುವ ಮೂಲಕ ತೆಲುಗಿನ ಯುಟ್ಯೂಬ್ ಜೋಡಿಯೊಂದು ಬೇಡವಾದ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಶಿವಜ್ಯೋತಿ ಎಂಬ ಯುಟ್ಯೂಬರ್ ತಮ್ಮ ಚಾನೆಲ್ ಜ್ಯೋತಕ್ಕಾದಲ್ಲಿ ತಿರುಪತಿ ದೇವಾಲಯದ ವಿಡಿಯೊದಲ್ಲಿ ಈ ಕುರಿತು ಮಾತನಾಡಿದ್ದಾರೆ.
ತಮ್ಮ ಪತಿ ಜತೆ ತಿರುಪತಿಗೆ ಗರ್ಭಿಣಿಯಾದ ಬಳಿಕ ಹರಕೆ ತೀರಿಸಲೆಂದು ತೆರಳಿದ್ದ ಈಕೆ ಕ್ಯೂನಲ್ಲಿ ನಿಂತಿದ್ದಾಗ ಅಲ್ಲಿ ನೀಡಿದ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಈ ಸಮಯಕ್ಕೆ ಆಕೆಯ ಪತಿ ಜೀವನದಲ್ಲಿ ಒಮ್ಮೆಯೂ ಭಿಕ್ಷೆ ಬೇಡಿರಲಿಲ್ಲ, ಆದರೆ ಇದೇ ಮೊದಲ ಬಾರಿಗೆ ಭಿಕ್ಷೆ ಬೇಡುವಂತಾಯಿತು ಎಂದಿದ್ದಾರೆ. ಇದಕ್ಕೆ ಯುಟ್ಯೂಬರ್ ನಕ್ಕಿದ್ದು ಈ ವಿಡಿಯೊನ ತುಣುಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಡಿಯೊ ಕುರಿತು ಮಹಿಳೆಯೊಬ್ಬರು ವಿಡಿಯೊ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲಿ ಯಾರೇ ಹೋದರೂ ಪ್ರಸಾದವನ್ನು ವಿತರಿಸುತ್ತಾರೆಯೇ ಹೊರತು ಯಾರೂ ಸಹ ಭಿಕ್ಷೆ ಬೇಡಿಕೊಂಡು ತಿನ್ನಬೇಕಿಲ್ಲ ಹಾಗೂ ಅಲ್ಲಿ ಭಿಕ್ಷೆ ಬೇಡಬೇಕಾದ ಅನಿವಾರ್ಯತೆಯೂ ಇರುವುದಿಲ್ಲ. ಪ್ರಸಾದ ವಿತರಣೆಯನ್ನು ಭಿಕ್ಷಾಟನೆಗೆ ಹೋಲಿಸುವ ಮನಸ್ಥಿತಿ ಇರುವವರು ದೇವಾಸ್ಥಾನಕ್ಕೆ ಏಕೆ ಹೋಗಬೇಕು? ಇದು ವೆಂಕಟೇಶ್ವರನ ಭಕ್ತರಿಗೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


