ಕರ್ನಾಟಕದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ಕುರಿತು ವರದಿ ನೀಡಲು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿತ್ತು. ಆಯೋಗ ವರದಿಯನ್ನು ನೀಡಿ, ಅದನ್ನು ಜಾರಿಗೊಳಿಸಲಾಗಿದೆ.
7ನೇ ವೇತನ ಆಯೋಗದ ವರದಿ ಜಾರಿ ಬಳಿಕ ರಾಜ್ಯ ಸರ್ಕಾರ ನೌಕರರ ಎರಡು ಪ್ರಮುಖ ಬೇಡಿಕೆಗಳಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮತ್ತು ಒಪಿಎಸ್ ಮರು ಜಾರಿ ಸೇರಿತ್ತು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅಕ್ಟೋಬರ್ 1ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿ ಯಾವಾಗ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಬೇಡ ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ. ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡವನ್ನು ಹಾಕುತ್ತಿದ್ದಾರೆ.
ಒಪಿಎಸ್ ಕುರಿತು ಅಪ್‌ಡೇಟ್: ಈಗ ಒಪಿಎಸ್ ಜಾರಿ ಕುರಿತು ಅಪ್‌ಡೇಟ್ ಸಿಕ್ಕಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಎನ್‌ಪಿಎಸ್ ಸಮಿತಿ ಸದಸ್ಯರು, ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ರೇಜು ಎಂ.ಟಿ. ಭೇಟಿ ಮಾಡಿ ಎನ್‌ಪಿಎಸ್ ರದ್ದುಗೊಳಿಸುವ ಕುರಿತ ವರದಿಯನ್ನು ಸಲ್ಲಿಕೆ ಮಾಡುವ ಕುರಿತು ಚರ್ಚೆಯನ್ನು ಮಾಡಿತು.
ಸಮಿತಿ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಕುರಿತು ವರದಿಯನ್ನು ಸರ್ಕಾರಕ್ಕೆ ಶೀಘ್ರವೇ ಸಲ್ಲಿಕೆ ಮಾಡಬೇಕು ಎಂದು ಒತ್ತಾಯಿಸಲಾಯತು. ನಿಯೋಗಕ್ಕೆ ವರದಿ ಅಂತಿಮ ಪರಿಶೀಲನೆಯಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಸರ್ಕಾರಿ ನೌಕರರ ಬೇಡಿಕೆಯಂತೆ ಎನ್‌ಪಿಎಸ್ ರದ್ದುಗೊಳಿಸಲು ತಯಾರಿ ನಡೆಸಿದೆ. ಈಗ ದಿನಾಂಕ 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರು ಎನ್‌ಪಿಎಸ್ ವ್ಯಾಪ್ತಿಗೆ ಬರುತ್ತಾರೆ. ಆದರೆ ಕೆಲವು ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಲಾಗಿದೆ.
ಸರ್ಕಾರ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗದರ್ಶನ ಹಾಗೂ ಕಾರ್ಯಾಚರಣೆಯ ವಿವರಗಳನ್ನು ಮರುಪರಿಶೀಲಿಸುವ ಅಗತ್ಯವಿರುತ್ತದೆ ಎಂದು ಹೇಳಿದೆ. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮರು ಜಾರಿ ಕುರಿತು ವರದಿ ನೀಡಲು ಸಮಿತಿಯನ್ನು ರಚನೆ ಮಾಡಿದೆ.
ಸಮಿತಿ ಹೊಸ ಪಿಂಚಣಿ ವ್ಯವಸ್ಥೆಯಿಂದ ಹಳೆಯ ಪಿಂಚಣಿ ಯೋಜನೆಗೆ ಪರಿಷ್ಕರಣೆ ಮಾಡುವುದರಿಂದ ಆಗುವ ಅನುಷ್ಠಾನದ ಪರಿಣಾಮವನ್ನು ಅಧ್ಯಯನ ಮಾಡಲು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹ ಮಾಡಿದೆ. ಸರ್ಕಾರಕ್ಕೆ ವರದಿ ನೀಡುವುದು ಬಾಕಿ ಇದೆ.
ಕರ್ನಾಟಕ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿ ಕುರಿತು ವರದಿ ನೀಡಲು ಸಮಿತಿ ರಚನೆ ಮಾಡಿದೆ. ಆದರೆ ವರದಿ ನೀಡಲು ಕಾಲಮಿತಿ ನಿಗದಿ ಮಾಡಿಲ್ಲ. ಆದ್ದರಿಂದ ಸಮಿತಿ ಯಾವಾಗ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ?, ಸರ್ಕಾರ ಅದನ್ನು ಯಾವಾಗ ಅನುಷ್ಠಾನಗೊಳಿಸಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ.
ಕೇಂದ್ರ ಸರ್ಕಾರಿ ನೌಕರರು, ವಿವಿಧ ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ವ್ಯವಸ್ಥೆ ಬೇಡ, ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡುತ್ತೇವೆ ಎಂದು ಸರ್ಕಾರಿ ನೌಕರರಿಗೆ ಭರವಸೆ ನೀಡಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


