ಬೆಂಗಳೂರು: ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಬಂಧನದ ವಾರಂಟ್ ಜಾರಿಯಾಗಿದೆ.
ಹೌದು, ತಮ್ಮ ಒಡೆತನದ ಕಂಪನಿಯಿಂದ ಉದ್ಯೋಗಿಗಳಿಗೆ ಹಾಗೂ ಸರ್ಕಾರಕ್ಕೆ ವಂಚಿಸಿದ ಪ್ರಕರಣದ ಅಡಿಯಲ್ಲಿ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಂಡಿದೆ.
ಸೆಂಚುರಿಸ್ ಲೈಫ್‌ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿದ್ದ ಉತ್ತಪ್ಪ ತಮ್ಮ ಕಂಪನಿಯ ಹಲವು ಉದ್ಯೋಗಿಗಳಿಗೆ ಪಿಎಫ್ ನೀಡದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಬಿನ್ ಉತ್ತಪ್ಪ ಒಡೆತನದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಮಾಸಿಕ ಸಂಬಳದಿಂದ ಪಿಎಫ್ ಮೊತ್ತವನ್ನು ಕಟ್ ಮಾಡಿಕೊಂಡಿದ್ದರೂ ಉದ್ಯೋಗಿಗಳ ಪಿಎಫ್ ಖಾತೆಗೆ ಅದನ್ನು ಜಮಾ ಮಾಡದೇ ಮೋಸ ಮಾಡಿದ್ದಾರೆ ಎಂದು ಹಲವು ಉದ್ಯೋಗಿಗಳು ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಿಎಫ್‌ಒ ರೀಜಿಯನಲ್ ಕಮಿಷನರ್ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಇದೇ ತಿಂಗಳ 4ರಂದು ಪುಲಿಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ರಾಬಿನ್ ಉತ್ತಪ್ಪ ಅವರಿಗೆ ನೊಟೀಸ್ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಆದರೆ ಆ ವಿಳಾಸದಲ್ಲಿ ಅವರು ವಾಸವಿಲ್ಲ. ಹೀಗಾಗಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಸದ್ಯ ದುಬೈಯಲ್ಲಿ ನೆಲೆಸಿರುವ ರಾಬಿನ್ ಉತ್ತಪ್ಪ ವಿರುದ್ಧ ಪ್ರಕರಣ ದಾಖಲಾಗಿರುವ ಕಾರಣ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


