ಮೈಸೂರು: ಜಿಲ್ಲೆಯ ಹೆಚ್‌ಡಿ ಕೋಟೆ ಹನುಮಂತ ನಗರದಲ್ಲಿ ಪತಿಯೇ ತನ್ನ ಪತ್ನಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ಮಾಡಿರುವ ಘಟನೆ ನಡೆದಿದೆ.
ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಿಬಿ ತಾಂಡಾದವನಾದ ಮಲ್ಲೇಶ್ ನಾಯ್ಕ್ ಅದೇ ಗ್ರಾಮದ ಮಧುರಳನ್ನು ವಿವಾಹವಾಗಿದ್ದ. ಕಳೆದ ಆರೇಳು ವರ್ಷಗಳಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹಾಗೂ ಅನುಮಾನದಿಂದ ನೋಡುತ್ತಿದ್ದ ಮಲ್ಲೇಶ ನಾಯ್ಕ್ ಪ್ರತಿ ದಿನ ಕುಡಿದು ಬಂದು ತವರು ಮನೆಯಿಂದ ಸೈಟ್ ಕೊಡಿಸುವಂತೆ ಗಲಾಟೆ ಮಾಡುತ್ತಿದ್ದ.
ಹೀಗೆ ಗಂಡನ ಸತತ ಗಲಾಟೆಯಿಂದ ಬೇಸತ್ತಿದ್ದ ಮಧುರ ಒಂದೆರಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿ ಬಂದಿದ್ದರು. ಇದೇ ಕಾರಣಕ್ಕಾಗಿ ಜಗಳ ತೆಗೆದಿದ್ದ ಮಲ್ಲೇಶ್ ನಾಯ್ಕ್ ಪುತ್ರನ ಎದುರೇ ಪತ್ನಿ ಮಧುರಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಮಧುರಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮಲ್ಲೇಶ್ ನಾಯ್ಕ್ ಹೆಚ್‌ಡಿ ಕೋಟೆಯ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಹೆಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


