ದುಬೈ: ನಾಳೆ (ಫೆಬ್ರವರಿ 23) ಇಲ್ಲಿನ ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಹು ನಿರೀಕ್ಷಿತ ಪಂದ್ಯ ನಡೆಯಲಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ಫೆಬ್ರವರಿ 20ರಂದು ಕರಾಚಿಯಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಸೋಲನ್ನು ಅನುಭವಿಸಿದ್ದರೆ, ಇತ್ತ ಭಾರತ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಶುಭಾರಂಭ ಮಾಡಿದೆ.
ಹೀಗೆ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನಕ್ಕೆ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಸೆಮಿಫೈನಲ್ ಪ್ರವೇಶಿಸಬೇಕೆಂದರೆ ಈ ಎರಡೂ ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಲೇಬೇಕಿದೆ.
ಇನ್ನು ಭಾರತಕ್ಕೂ ಸಹ ಈ ಪಂದ್ಯ ಗೆದ್ದರೆ ಸೆಮಿಫೈನಲ್ ಹಾದಿ ಸುಗಮವಾಗಲಿದ್ದು, ಪಂದ್ಯ ಮಹತ್ವ ಪಡೆದುಕೊಂಡಿದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಇದು ಬದ್ಧ ವೈರಿಗಳ ಕಾಳಗ ಎನಿಸಿಕೊಂಡಿದ್ದು, ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ.
ಈ ಕುರಿತಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಆಮಿರ್ ಮಾತನಾಡಿದ್ದು, “ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತದ್ದು ಭಾರತದ ವಿರುದ್ಧದ ಪಂದ್ಯದ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಓರ್ವ ಪಾಕಿಸ್ತಾನಿಯಾಗಿ ಪಾಕ್ ಸೆಮಿಫೈನಲ್ ತಲುಪಲಿದ್ದಾರೆ ಎನ್ನುವ ನಂಬಿಕೆ ನನಗೂ ಇದೆ. ಈ ಪಂದ್ಯದಲ್ಲಿ ಪಾಕ್ ಗೆದ್ದರೆ ಏನು ಬೇಕಾದರೂ ಆಗಬಹುದು” ಎಂದರು.
ಬಳಿಕ ಪಾಕಿಸ್ತಾನಕ್ಕೆ ಗೆಲ್ಲುವ ಸಾಧ್ಯತೆ ಎಷ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಮಿರ್ 40% ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


