ಬೆಂಗಳೂರು: ಯಾವುದೇ ಲೋಪಗಳನ್ನು ಪತ್ತೆ ಹಚ್ಚುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಮುಖಂಡರನ್ನು ಯಾವುದಾದರೂ ರೀತಿ ಸಿಲುಕಿಸಿ ತೊಂದರೆ ನೀಡುವ ಪ್ರವೃತ್ತಿಯನ್ನೇ ಕೇಂದ್ರ ಸರ್ಕಾರ ವ್ಯಾಪಕವಾಗಿ ಅನುಸರಿಸುತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳೆದ 2 ವರ್ಷಗಳಿಂದಲೂ ಜಾರಿ ನಿರ್ದೇಶನಾಲಯದ ಕಾರ್ಯವೈಖರಿ ಬಗ್ಗೆ ಪದೇ ಪದೇ ನ್ಯಾಯಾಲಯಗಳು ಛೀಮಾರಿ ಹಾಕುತ್ತಲೇ ಇದೆ. ಆದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ತನಿಖಾ ಸಂಸ್ಥೆಗಳನ್ನು ರಾಜಕೀಯ ದುರುದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುವ ಧೋರಣೆಯನ್ನು ನಿಲ್ಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಸುಪ್ರೀಂಕೋರ್ಟ್ ಕಟುವಾದ ಭಾಷೆಯನ್ನು ಬಳಸಿದೆ. ಈ ಮೊದಲು ಮಹಾರಾಷ್ಟ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಹೈಕೋರ್ಟ್ ಕೂಡ ಇಡಿಗೆ ಛೀಮಾರಿ ಹಾಕಿತ್ತು. ಎಲ್ಲಾ ಪ್ರಕರಣಗಳಲ್ಲೂ ರಾಜಕೀಯದಾಟವೇ ಹೆಚ್ಚಾಗಿದೆ ಎಂದು ಹೇಳಿದರು.
ವಿರೋಧಪಕ್ಷಗಳನ್ನು ಬಗ್ಗು ಬಡಿಯಲು ಜಾರಿ ನಿರ್ದೇಶನಾಲಯವನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ನ್ಯಾಯಾಲಯಕ್ಕಷ್ಟೇ ಅಲ್ಲ, ದೇಶದ ಶ್ರೀಸಾಮಾನ್ಯರಿಗೂ ಅರಿವಾಗಿದೆ. ಈಗಲಾದರೂ ಕೇಂದ್ರ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ದ್ವೇಷ ರಾಜಕಾರಣದ ಬದಲಾಗಿ ಅಭಿವೃದ್ಧಿಪರ ರಾಜಕಾರಣದತ್ತ ಗಮನ ಹರಿಸಲಿ ಎಂದರು.
ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ದಾಖಲಿಸಿದ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿತ್ತು. ಕೇಂದ್ರ ಸರ್ಕಾರ ಒತ್ತಡ ಹೇರಿ ಸಿಬಿಐನಿಂದ ಆದಾಯ ತೆರಿಗೆಗೆ ಪತ್ರ ಬರೆಸಿದರು. ಆದಾಯ ತೆರಿಗೆಯಿಂದ ಬೇನಾಮಿ ಆಸ್ತಿಗಳ ತನಿಖೆಗೆ ಪತ್ರ ಬರೆಯಲಾಯಿತು. ಬೇನಾಮಿಯವರು ಮತ್ತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದರು. ಜಾರಿ ನಿರ್ದೇಶನಾಲಯ ಮತ್ತೆ ಸಿಬಿಐಗೆ, ಸಿಬಿಐನಿಂದ ಮತ್ತೆ ಆದಾಯ ತೆರಿಗೆಗೆ ಪತ್ರಗಳ ವ್ಯವಹಾರ ನಡೆದಿದೆ. ಇಲ್ಲಿ ತಪ್ಪುಗಳನ್ನು ಪತ್ತೆ ಹಚ್ಚುವುದಕ್ಕಿಂತಲೂ ಹೇಗಾದರೂ ಮಾಡಿ ಒಂದಲ್ಲಾ ಒಂದು ವಿಚಾರದಲ್ಲಿ ಸಿಲುಕಿಸಬೇಕು ಎಂಬ ಧಾವಂತವೇ ಕಾಣುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ಸರಣಿ ಕೊಲೆ: ಹಿಂದೆ ಸರಿದ್ರಾ ತನಿಖೆಗೆ ನೇಮಿಸಿದ್ದ ಪೊಲೀಸರು? ಪರಮೇಶ್ವರ್ ಪ್ರತಿಕ್ರಿಯೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


