ಹೊಸದಿಲ್ಲಿ: ದೇಶದ ಜನತೆಗೆ ಬೆಲೆ ಏರಿಕೆಯ ಬೀಸಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸರಕು ಸೇವಾ ತೆರಿಗೆ ( ಜಿಎಸ್‌ಟಿ ) ಪರಿಷ್ಕರಣೆ ಮಾಡಿದ ಹಿನ್ನಲೆಯಲ್ಲಿ ಇಂದಿನಿಂದ ( ಸೆಪ್ಟೆಂಬರ್ 22 ) ದೇಶದದ್ಯಾಂತ ದಿನನಿತ್ಯ ಬಳಸುವ ಹಾಲಿನಿಂದ ಹಿಡಿದು ಟೂತ್‍ಪೇಸ್ಟ್‍ವರೆಗೆ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಇದು ಮಧ್ಯಮ ವರ್ಗದ ಜನರಿಗೆ ದೊಡ್ಡ ಮಟ್ಟದ ನೆರವು ನೀಡುವುದಂತೂ ಖಚಿತ.
ಹಾಲು, ತುಪ್ಪ, ಪನೀರ್‍ನಂತಹ ಡೈರಿ ಉತ್ಪನ್ನಗಳು ಇನ್ಮುಂದೆ ಅಗ್ಗವಾಗಲಿವೆ. ಈ ಮೊದಲು 1 ಲೀಟರ್ ಟೆಟ್ರಾ ಪ್ಯಾಕ್ ಹಾಲು 77 ರೂ. ಇತ್ತು. ಇನ್ನು ಮುಂದೆ ಇದು ಕೇವಲ 75 ರೂ ಗೆ ಸಿಗಲಿದೆ.
ಕೇವಲ ಆಹಾರ ಪದಾರ್ಥಗಳು ಮಾತ್ರವಲ್ಲ, ಮನೆಯಲ್ಲಿ ಪ್ರತಿದಿನ ಬಳಸುವ ಸೋಪು, ಡಿಟರ್ಜೆಂಟ್, ಟೂತ್‍ಪೇಸ್ಟ್, ಶಾಂಪೂ, ಹೇರ್ ಆಯಿಲ್‍ನಂತಹ ಶೇ. 99ರಷ್ಟು ವಸ್ತುಗಳ ಮೇಲಿನ ಜಿಎಸ್‍ಟಿಯನ್ನು ಶೇ. 12 ರಿಂದ ನೇರವಾಗಿ ಶೇ. 5ಕ್ಕೆ ಇಳಿಸಲಾಗಿದೆ.
ಸೋಪಿನಿಂದ ಕಾರಿನತನಕ, ಟ್ರ್ಯಾಕ್ಟರ್‍ನಿಂದ ಹವಾನಿಯಂತ್ರಕಗಳವರೆಗೆ ಒಟ್ಟು 400 ಉತ್ಪನ್ನಗಳ ಬೆಲೆ ಕಡಿತವಾಗಲಿದೆ. ನಿತ್ಯ ಬಳಸುವ ಆಹಾರ, ಗೃಹೋಪಯೋಗಿ ಉತ್ಪನ್ನಗಳು ಶೇ.5 ತೆರಿಗೆ ವ್ಯಾಪ್ತಿಗೆ ಬರುತ್ತವೆ. ಹಾಲು, ಬ್ರೆಡ್ ಮತ್ತು ಪನೀರ್‍ನಂತಹ ಉತ್ಪನ್ನಗಳಿಗೆ ಯಾವುದೇ ತೆರಿಗೆ ಇಲ್ಲ. ಪರಿಷ್ಕೃತ ದರಗಳು ನವರಾತ್ರಿಯ ಮೊದಲು ದಿನ ಅಂದರೆ ಸೆ.22ರಿಂದ ಜಾರಿಗೆ ಬರುತ್ತವೆ.
ಔಷಧ ಕಂಪನಿಗಳಿಗೆ ಸೂಚನೆ
ಮಾರುಕಟ್ಟೆಯಲ್ಲಿಈಗಾಗಲೇ ಇರುವ ಔಷಧಗಳು ಹಾಗೂ ವೈದ್ಯಕೀಯ ಸಲಕರಣೆಗಳ ಬೆಲೆಗಳನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಹಿಂಪಡೆದು ಹೊಸ ಲೇಬಲ್‍ನೊಂದಿಗೆ ಮತ್ತೆ ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ. ಆದರೆ ಈ ಉತ್ಪನ್ನಗಳ ತಯಾರಕರು ಮತ್ತು ಮಾರ್ಕೆಟಿಂಗ್ ಕಂಪನಿಗಳು ಚಿಲ್ಲರೆ ಮಾರಾಟವು ಪರಿಷ್ಕೃತ ದರದಲ್ಲಿಮಾರಾಟವಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‍ಪಿಪಿಎ) ಆದೇಶಿಸಿದೆ.
ಔಷಧಗಳ ಮೇಲಿನ ತೆರಿಗೆಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಸೆ.22ರಿಂದ ಹೊಸ ದರಗಳು ಜಾರಿಗೆ ಬರುತ್ತದೆ. ಆದರೆ ಈಗಾಗಲೇ ಮಳಿಗೆಗಳಲ್ಲಿಹಳೆಯ ದಾಸ್ತಾನು ಇದ್ದು, ಅವುಗಳನ್ನು ಗ್ರಾಹಕರು ಖರೀದಿಸುವಾಗ ಹಳೆಯ ದರಗಳಲ್ಲೇ ಖರೀದಿ ಮಾಡುವಂತಿಲ್ಲ. ಹೊಸ ದರಗಳು ಅನ್ವಯವಾಗುತ್ತವೆ.ಇದನ್ನು ಔಷಧಗಳ ಮೇಲೆ ಮುದ್ರಿಸದೇ ಇದ್ದರೂ ಪರಿಷ್ಕೃತ ದರಗಳಲ್ಲೇ ಮಾರಾಟ ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ.
ಜಿಎಸ್‍ಟಿ ಇಳಿಕೆಯ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮದರ್ ಡೈರಿ ಘೋಷಿಸಿದೆ. ಅಲ್ಲದೆ ತನ್ನ ಬಹುತೇಕ ಉತ್ಪನ್ನಗಳ ದರವನ್ನು ಇಳಿಸಿದೆ. ಟೆಟ್ರಾಪ್ಯಾಕ್ ಹಾಲು ಲೀಟರ್‌ಗೆ 2 ರೂ. ಕಡಿಮೆಯಾಗಲಿದೆ. ಪನೀರ್, ಮಲೈ ಪನೀರ್, ಬೆಣ್ಣೆ, ಮಿಲ್ಕ್ ಶೇಕ್, ತುಪ್ಪ, ಐಸ್‍ಕ್ರೀಮ್ ಬೆಲೆ ಕಡಿಮೆಯಾಗಲಿದೆ.
ಜಿಎಸ್‍ಟಿ ವ್ಯವಸ್ಥೆಯಲ್ಲೇ ದೊಡ್ಡ ಬದಲಾವಣೆ!
ಈ ಬೆಲೆ ಇಳಿಕೆಗೆ ಕಾರಣವಾಗಿದ್ದು ಜಿಎಸ್‍ಟಿ ತೆರಿಗೆ ವ್ಯವಸ್ಥೆಯಲ್ಲಿ ಮಾಡಲಾದ ದೊಡ್ಡ ಬದಲಾವಣೆ. ಇಲ್ಲಿಯವರೆಗೆ ದೇಶದಲ್ಲಿ 5%, 12%, 18% ಮತ್ತು 28% ಅಂತ ನಾಲ್ಕು ಜಿಎಸ್‍ಟಿ ಸ್ಲ್ಯಾಬ್‍ಗಳಿದ್ದವು. ಆದರೆ, ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು 12% ಮತ್ತು 28% ತೆರಿಗೆ ಸ್ಲ್ಯಾಬ್‍ಗಳನ್ನೇ ಸಂಪೂರ್ಣವಾಗಿ ತೆಗೆದುಹಾಕಿದೆ.
ದೇಶದಲ್ಲಿ ಕೇವಲ ಎರಡೇ ಜಿಎಸ್‍ಟಿ ಸ್ಲ್ಯಾಬ್‍ಗಳು ಇರಲಿವೆ. ಅವುಗಳೆಂದರೆ 5% ಮತ್ತು 18%. ದಿನಬಳಕೆಯ ಮತ್ತು ಅಗತ್ಯ ವಸ್ತುಗಳನ್ನು 5% ಸ್ಲ್ಯಾಬ್‍ನಡಿ ತರಲಾಗಿದ್ದರೆ, ಉಳಿದ ವಸ್ತುಗಳು 18% ಸ್ಲ್ಯಾಬ್‍ನಲ್ಲಿ ಇರಲಿವೆ. ಈ ಬಗ್ಗೆ ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಮಾಹಿತಿ ನೀಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಇಳಿಯುತ್ತಿರುವಾಗ, ಐಷಾರಾಮಿ ವಸ್ತುಗಳನ್ನು ಬಳಸುವವರಿಗೆ ಸರ್ಕಾರ ಶಾಕ್ ನೀಡಿದೆ. ದುಬಾರಿ ಕಾರುಗಳು, ಸಿಗರೇಟ್, ತಂಬಾಕು ಉತ್ಪನ್ನಗಳು ಮತ್ತು ಐಷಾರಾಮಿ ಸೇವೆಗಳಂತಹ ವಸ್ತುಗಳ ಮೇಲೆ 40% ಹೊಸ ತೆರಿಗೆ ಸ್ಲ್ಯಾಬ್ ಅನ್ನು ಪರಿಚಯಿಸಲಾಗಿದೆ. ಅಂದರೆ, ಇಂತಹ ವಸ್ತುಗಳು ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿವೆ.
ಪರಿಷ್ಕೃತ ಜಿಎಸ್‍ಟಿ ದರಗಳಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಹಬ್ಬದ ಋ?ತುವಿನಲ್ಲಿಖರೀದಿ ಭರಾಟೆ ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಹೀಗಾಗಿ, ಜಿಎಸ್‍ಟಿ ಇಳಿಕೆಯಿಂದ ದರ ಕಡಿತ ಆಗಿರುವುದನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಚಿಲ್ಲರೆ ಮಳಿಗೆಗಳು ಹೆಚ್ಚಿನ ಗಮನ ನೀಡಬೇಕು ಎಂದು ಸೂಚಿಸಿದೆ.
ಈ ಕುರಿತು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ನಿರ್ದೇಶನ ನೀಡಿದ್ದು, ಜಿಎಸ್‍ಟಿ ಪರಿಷ್ಕರಣೆಯಿಂದ ಆಗಿರುವ ದರ ಕಡಿತದ ವಿವರಗಳನ್ನು ಎಲ್ಲಚಿಲ್ಲರೆ ಮಳಿಗೆಗಳ ಮುಂದೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಬಿಲ್‍ಗಳಲ್ಲಿ ಜಿಎಸ್‍ಟಿ ಕಡಿತದ ಬಗ್ಗೆ ಉಲ್ಲೇಖವಿರಬೇಕು ಎಂದು ನಿರ್ದೇಶನ ನೀಡಿದೆ.
ಮುದ್ರಣ, ಟಿವಿ, ಆನ್‍ಲೈನ್ ಜಾಹೀರಾತುಗಳ ಮೂಲಕವೂ ಜಿಎಸ್‍ಟಿ ಇಳಿಕೆಯ ಕುರಿತು ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ಜಿಎಸ್‍ಟಿ ಪರಿಷ್ಕರಣೆಯಿಂದ ಆಗಿರುವ ಇಳಿಕೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಸರಣಿ ಹಬ್ಬಗಳ ಸಂದರ್ಭದಲ್ಲಿವಿವಿಧ ಮಾಧ್ಯಮಗಳ ಮೂಲಕ ದರ ಕಡಿತದ ವಿವರಗಳನ್ನು ಗ್ರಾಹಕರಿಗೆ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಗ್ರಾಚ್ಯುಟಿ ಎಂದರೇನು? ಲೆಕ್ಕ ಹಾಕುವ ವಿಧಾನ ಮತ್ತು ಪಡೆಯಲು ಬೇಕಾದ ಸೇವಾ ಅವಧಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


