ನಾಯಕತ್ವ ಬದಲಾವಣೆ ಕುರಿತು ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಸರಣಿ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಿವೆ. ಕ್ಷಣ ಕ್ಷಣಕ್ಕೆ ರಾಜ್ಯ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.
ಮೀನುಗಾರಿಕೆ ಇಲಾಖೆ ಶನಿವಾರ ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ’ವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಬೈರತಿ ಸುರೇಶ್, ಮಂಕಾಳು ವೈದ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಾವರಂಭದ ವೇದಿಕೆಯಲ್ಲಿ ಹಲವು ಬಾರಿ ಸಿಎಂ, ಡಿಸಿಎಂ ಮಾತನಾಡುತ್ತಿದ್ದ ವಿಡಿಯೋಗಳು ಈಗ ವೈರಲ್ ಆಗುತ್ತಿವೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುರಿತು ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಮನಸೆಳೆಯುತ್ತಿದೆ ವೈವಿಧ್ಯಮಯ ಮತ್ಸ್ಯಮೇಳ. ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ-2025 ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು’ ಎಂದು ಹೇಳಿದ್ದಾರೆ.
‘ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ನಿನ್ನೆಯಿಂದ ಆಯೋಜಿಸಿರುವ ಮೂರು ದಿನಗಳ ಈ ಕಾರ್ಯಕ್ರಮವು ಹಲವು ವಿಶೇಷತೆಗಳಿಂದ ಕೂಡಿದೆ. ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ತಯಾರಿ, ಮಾರಾಟ, ರಫ್ತು ಮಾಡುವ ಉದ್ದೇಶದಿಂದ ಜನರಿಗೆ ಮೀನಿನ ವಿಶೇಷ ತಿಂಡಿಗಳನ್ನು ಈ ಸಲದ ಮತ್ಸ್ಯಮೇಳದಲ್ಲಿ ಪರಿಚಯಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ರಾಜ್ಯ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆ ಹತ್ತು ಹಲವು ಮಾಹಿತಿಗಳನ್ನು ತಿಳಿಸಿಕೊಡುತ್ತಿದೆ. ಇಲ್ಲಿ ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆಯೂ ವಿಸ್ತೃತ ಮಾಹಿತಿ ಸಿಗಲಿದ್ದು, ಜೊತೆಗೆ ಗಮನ ಸೆಳೆಯುವಂತಹ ಮೀನುಗಾರಿಕೆಯಲ್ಲಿ ಬಳಸುವ ಸಾಧನಗಳನ್ನು ಮಳಿಗೆಯಲ್ಲಿ ವೀಕ್ಷಿಸಬಹುದಾಗಿದೆ’ ಎಂದು ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಹಲವಾರು ನಾಯಕರು, ಸಚಿವರು ಭೇಟಿ ನೀಡುತ್ತಿದ್ದಾರೆ. ಸಚಿವ ಈಶ್ವರ ಖಂಡ್ರೆ, ಶಾಸಕ ಅಜಯ್ ಸಿಂಗ್ ಸೇರಿದಂತೆ ಹಲವಾರು ನಾಯಕರು ಭೇಟಿ ನೀಡಿದ್ದರು.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಖರ್ಗೆ ನಿವಾಸಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಎಷ್ಟು ಹೊತ್ತಿಗೆ ಅವರು ಭೇಟಿ ನೀಡಲಿದ್ದಾರೆ? ಎಂಬುದು ಖಚಿತವಾಗಿಲ್ಲ.
ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಖರ್ಗೆ ಭೇಟಿ ಮಾಡಲಿದ್ದಾರೆ. ಆದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಖರ್ಗೆ ಭೇಟಿ ಮಾಡಿ, ರಾಜ್ಯ ಕಾಂಗ್ರೆಸ್‌ನಲ್ಲಿನ ಗೊಂದಲಗಳ ಕುರಿತು ಚರ್ಚಿಸುವ ನಿರೀಕ್ಷೆ ಇದೆ.
ಈಗಾಲಗೇ ನಾಯಕತ್ವ ಬದಲಾವಣೆ ಕುರಿತು ನಾಯಕರು ಹೇಳಿಕೆ ನೀಡಬಾರದು ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ ಹಲವು ಶಾಸಕರು ಸಿದ್ದರಾಮಯ್ಯ ಭೇಟಿ ಮಾಡಿ ರಾಜಕೀಯ ಬೆಳವಣಿಗೆ ಕುರಿತು ಮಾತುಕತೆ ನಡೆಸುತ್ತಿದ್ದಾರೆ.
ಸರ್ಕಾರ ಅಸ್ಥಿರಗೊಳಿಸುವುದಿಲ್ಲ: ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದರೆ, ಬಿ.ವೈ.ವಿಜಯೇಂದ್ರ ಉಪಮುಖ್ಯಮಂತ್ರಿ ಆಗುತ್ತಾರೆ ಎಂಬ ವದಂತಿಗಳನ್ನು ತಳ್ಳಿ ಹಾಕಿದರು.
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ. ಅಂತಹ ಯಾವುದೇ ಯೋಚನೆ ನಮ್ಮ ಪಕ್ಷದ್ದಲ್ಲ. ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದ್ದು, ಯಾವುದೇ ಕಾರಣಕ್ಕೂ ಈ ಸರ್ಕಾರದ ಅಸ್ಥಿರತೆಯನ್ನು ನಾವು ಬಯಸುವುದಿಲ್ಲ” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


