ಆನೇಕಲ್ ಮೂಲಕ ಅತ್ತಿಬೆಲೆ ತನಕ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿವೆ.
ವಿಧಾನಸಭೆಯಲ್ಲಿ ಆನೇಕಲ್ ಶಾಸಕ ಶಿವಣ್ಣ ಬಿ. ಕೇಳಿದ್ದ ಪ್ರಶ್ನೆಗೆ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಡಿ.ಕೆ.ಶಿವಕುಮಾರ್ ಉತ್ತರವನ್ನು ಕೊಟ್ಟಿದ್ದಾರೆ. ಆನೇಕಲ್ ತನಕ ಮೆಟ್ರೋ ಸೇವೆ ವಿಸ್ತರಣೆ ಕುರಿತು ಅವರು ವಿವರಣೆಯನ್ನು ನೀಡಿದ್ದಾರೆ.
ಶಾಸಕರು ಗೊಟ್ಟಿಗೆರೆ-ಬನ್ನೇರುಘಟ್ಟ-ಜಿಗಣಿ-ಇಂಡ್ಲವಾಡಿ ಇಂಟರ್‌ನ್ಯಾಷನಲ್ ಸ್ಟೇಡಿಯಂ ವಯಾ ಆನೇಕಲ್ ಮೂಲಕ ಅತ್ತಿಬೆಲೆ ತನಕ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? ಎಂದು ಕೇಳಿದ್ದರು.
ಹಾಗಿದ್ದಲ್ಲಿ ಈ ಕಾಮಗಾರಿಯನ್ನು ಯಾವಾಗ ಪ್ರಾರಂಭಿಸಲಾಗುವುದು? (ಪೂರ್ಣ ಮಾಹಿತಿ ನೀಡಿವುದು) ಎಂದು ಶಾಸಕರು ಪಶ್ನೆ ಮಾಡಿದ್ದರು.
ಡಿ.ಕೆ.ಶಿವಕುಮಾರ್ ತಮ್ಮ ಉತ್ತರದಲ್ಲಿ ಬಿಎಂಆರ್‌ಸಿಎಲ್ ಸಂಸ್ಥೆಯ ಪರಿಶೀಲನೆಯಲ್ಲಿದೆ ಎಂದು ಉತ್ತರ ನೀಡಿದ್ದಾರೆ. ಅಲ್ಲದೇ ಸದರಿ ಮಾರ್ಗಕ್ಕೆ ಮೆಟ್ರೋ ಯೋಜನೆಯನ್ನು ವಿಸ್ತರಿಸಲು ಕಾರ್ಯಸಾಧ್ಯತೆ ಅಧ್ಯಯನವನ್ನು ಕೈಗೊಳ್ಳಲು ಮೆ. ಇಂಟ್ರೋಸಾಫ್ಟ್ ಸೆಲ್ಯೂಷನ್ಸ್ ಇವರಿಗೆ ವಹಿಸಲಾಗಿತ್ತು ಎಂದು ಹೇಳಿದ್ದಾರೆ.
ಸದರಿ ಸಂಸ್ಥೆಯು ಕರಡು ಅಧ್ಯಯನ ಪ್ರತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಸಲ್ಲಿಸಿರುತ್ತಾರೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಪರಿಶೀಲನೆಯಲ್ಲಿರುತ್ತದೆ. ಸರ್ಕಾರಕ್ಕೆ ಪ್ರಸ್ತಾವನೆ ಸ್ವೀಕೃತಗೊಂಡ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಉತ್ತರ ನೀಡಿದ್ದಾರೆ.
ಈ ಯೋಜನೆ ಕುರಿತು ಚರ್ಚೆ: ಆನೇಕಲ್ ತನಕ ನಮ್ಮ ಮೆಟ್ರೋ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಕಾಳೇನ ಅಗ್ರಹಾರದಿಂದ ಜಿಗಣಿ, ಆನೇಕಲ್ ಮೂಲಕ ಕಾಡುಗೋಡಿಯವರೆಗೆ ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಯ ಭಾಗವಾಗಿದ್ದು, ಸದ್ಯಕ್ಕೆ ಅಧ್ಯಯನ ಹಂತದಲ್ಲಿದೆ.
ನಮ್ಮ ಮೆಟ್ರೋ ಜಾಲವನ್ನು 197 ಕಿ.ಮೀ.ಗೆ ವಿಸ್ತರಣೆ ಮಾಡುವ ಆಲೋಚನೆಯಲ್ಲಿರುವ ಬಿಎಂಆರ್‌ಸಿಎಲ್ ಈ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದೆ. 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹೊಸ ಮಾರ್ಗದ ನಿರ್ಮಾಣದ ಕುರಿತು ಕರ್ನಾಟಕ ಸರ್ಕಾರ ಘೋಷಣೆ ಮಾಡುವ ನಿರೀಕ್ಷೆ ಇದೆ.
ತುಮಕೂರು, ಹೊಸಕೋಟೆ, ಬಿಡಿದಿ ತನಕ ನಮ್ಮ ಮೆಟ್ರೋ ಯೋಜನೆಯನ್ನು ವಿಸ್ತರಣೆ ಮಾಡಲು ಕರ್ನಾಟಕ ಸರ್ಕಾರ ತಯಾರಿ ನಡೆಸಿದೆ. ಈಗಾಗಲೇ ಮಾದಾವರ-ತುಮಕೂರು ನಡುವೆ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲು ಟೆಂಡರ್ ಕರೆಯಲಾಗಿದೆ.
ಕಾಳೇನ ಅಗ್ರಹಾರ-ಆನೇಕಲ್-ಸರ್ಜಾಪುರ-ಕಾಡುಗೋಡಿ ತನಕ ಮೆಟ್ರೋ ವಿಸ್ತರಣೆ ಮಾಡಿದರೆ 68 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಕಾಳೇನ ಅಗ್ರಹಾರ ಗುಲಾಬಿ ಮಾರ್ಗದಲ್ಲಿ ಬರಲಿದ್ದು, ಅಲ್ಲಿಯ ತನಕ ಈಗ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ.
ಅಲ್ಲಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್-ಜಿಗಣಿ-ಆನೇಕಲ್-ಅತ್ತಿಬೆಲೆ-ಸರ್ಜಾಪುರ ತಲುಪಿ ಅಲ್ಲಿ ಕೆಂಪು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವುದು ಪ್ರಸ್ತಾವಿತ ಯೋಜನೆಯಾಗಿದೆ. ಆದರೆ ಈ ಯೋಜನೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


