ಬೆಂಗಳೂರು ನಗರದಲ್ಲಿ ಓಲಾ, ಊಬರ್ ಪ್ರಯಾಣಿಕರು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದ ಹಲವು ಪ್ರಕರಣಗಳು ವರದಿಯಾಗಿದ್ದವು. ಕ್ಯಾಬ್‌ನಲ್ಲಿ ಸಂಚಾರ ನಡೆಸುವ ಮಹಿಳೆಯರ ಸುರಕ್ಷತೆ ಬಗ್ಗೆ ಪೊಲೀಸರು ಹೆಚ್ಚಿನ ಗಮನಹರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಆದ್ದರಿಂದ ಈಗ ಬೆಂಗಳೂರು ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಪ್ರಯಾಣಿಕರ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸರೊಂದಿಗೆ ಉಬರ್ ಮತ್ತು ಓಲಾ ತುರ್ತು ಸ್ಪಂದನಾ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಇದರ ಭಾಗವಾಗಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿಯೇ ತುರ್ತು ಕರೆ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಬೆಂಗಳೂರು ನಗರ ಪೊಲೀಸರು ಕ್ಯಾಬ್ ಅಗ್ರಿಗೇಟರ್ ಸಂಸ್ಥೆಗಳಾದ ಊಬರ್ ಮತ್ತು ಓಲಾ ಸಹಯೋಗದೊಂದಿಗೆ ಈ ಹೊಸ ಫೀಚರ್ ಪರಿಚಯಿಸಿದ್ದಾರೆ. ಪ್ರಯಾಣಿಕರ ಮತ್ತು ಚಾಲಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನ ಆಧಾರಿತ ಹೊಸ ಕ್ರಮ ಜಾರಿಗೆ ತಂದಿದೆ.
ಊಬರ್ ಮತ್ತು ಓಲಾ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ತುರ್ತು ಕರೆ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ತುರ್ತು ಸಹಾಯದ ಅಗತ್ಯವಿರುವ ಪ್ರಯಾಣಿಕರು ಮತ್ತು ಚಾಲಕರು ತಮ್ಮ ಲೈವ್ ಲೊಕೇಶನ್, ಪ್ರವಾಸದ ವಿವರಗಳು ಮತ್ತು ಸಂಪರ್ಕ ಮಾಹಿತಿಯನ್ನು ನೇರವಾಗಿ ಬೆಂಗಳೂರು ನಗರ ಪೊಲೀಸರ 112 ತುರ್ತು ಸ್ಪಂದನಾ ಕೇಂದ್ರಕ್ಕೆ ಅಪ್ಲಿಕೇಶನ್ ಮೂಲಕವೇ ಹಂಚಿಕೊಳ್ಳಬಹುದಾಗಿದೆ.
ಹೀಗೆ ಮಾಹಿತಿಯನ್ನು ಹಂಚಿಕೊಂಡ ತಕ್ಷಣ ತುರ್ತು ಸಂದರ್ಭಗಳಲ್ಲಿ ಪೊಲೀಸರು ಸ್ಥಳಕ್ಕೆ ಶೀಘ್ರವಾಗಿ ತಲುಪಲು ಮತ್ತು ಸಮಯಕ್ಕೆ ಸರಿಯಾಗಿ ಸ್ಪಂದಿಸಲು ಸಹಕಾರಿಯಾಗಲಿದೆ. ನಗರದಲ್ಲಿ ಸಂಚಾರವನ್ನು ಸುರಕ್ಷಿತವಾಗಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಪ್ರಮುಖ ಹೆಜ್ಜೆಯಾಗಿದೆ.
ಈ ಕುರಿತು ಬೆಂಗಳೂರು ನಗರ ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಿದ್ದಾರೆ. ಈ ಸುರಕ್ಷತಾ ಸೌಲಭ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರಿಗೆ ಈ ತುರ್ತು ಸಹಾಯದ ಸೌಲಭ್ಯ ಮತ್ತು ಅದರ ಬಳಕೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಎಲ್ಲರ ಪ್ರಯಾಣವನ್ನು ಸುರಕ್ಷಿತವಾಗಿಸಲು ಸಹಕರಿಸಬೇಕೆಂದು ಬೆಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.
ಮಹಿಳಾ ಪ್ರಯಾಣಿಕರ ಸುರಕ್ಷತೆ ಮಾತ್ರವಲ್ಲ ಕ್ಯಾಬ್ ಚಾಲಕರನ್ನು ಸುಲಿಗೆ ಮಾಡುವುದು, ಕ್ಯಾಬ್ ಬುಕ್ ಮಾಡಿ ಚಾಲಕರನ್ನು ಥಳಿಸಿ ಹಣ ವಸೂಲಿ ಮಾಡುವುದು, ಕ್ಯಾಬ್ ಜೊತೆ ಪರಾರಿಯಾಗುವ ಪ್ರಕರಣಗಳು ಸಹ ನಗರದಲ್ಲಿ ನಡೆದಿವೆ. ಆದ್ದರಿಂದ ಬೆಂಗಳೂರು ನಗರ ಪೊಲೀಸರ ಈ ಕ್ರಮ ಚಾಲಕರಿಗೆ ತುರ್ತು ಸಂದರ್ಭದಲ್ಲಿ ಸಹಾಯಕವಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


