ದುಬೈ: ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಐದನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ.
ಈ ಬದ್ಧ ವೈರಿಗಳ ಕಾಳಗದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 42.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿದೆ.
ಭಾರತದ ಪರ ಕುಲ್‌ದೀಪ್ ಯಾದವ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ಹರ್ಷಿತ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು. ಭಾರತದ ಬೌಲಿಂಗ್ ದಾಳಿಗೆ ಪಾಕ್ ಮಂಕಾಗಿದ್ದು, ರನ್ ಗಳಿಸಲು ಪರದಾಡಿತು. ಇಡೀ ಇನ್ನಿಂಗ್ಸ್‌ನಲ್ಲಿ ಖುಷ್‌ದಿಲ್ ಷಾ ಹೊರತುಪಡಿಸಿ ಇನ್ಯಾವುದೇ ಆಟಗಾರ ಸಹ ಸಿಕ್ಸರ್ ಬಾರಿಸಲಾಗದ ಮಟ್ಟಿಗೆ ಭಾರತದ ಬೌಲಿಂಗ್ ಪಾಕ್ ಆಟಗಾರರನ್ನು ಕಾಡಿತು.
ಭಾರತದ ಇನ್ನಿಂಗ್ಸ್: ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 20 ರನ್ ಗಳಿಸಿದರೆ, ಶುಬ್‌ಮನ್ ಗಿಲ್ 46 ರನ್ ಬಾರಿಸಿದರು. ಮೂರನೇ ವಿಕೆಟ್‌ಗೆ ಜತೆಯಾದ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ 114 ರನ್‌ಗಳ ಜತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನತ್ತ ತಂದರು. ಐಯ್ಯರ್ 56 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 8 ರನ್ ಹಾಗೂ ಅಕ್ಷರ್ ಪಟೇಲ್ ಅಜೇಯ 3 ರನ್ ಬಾರಿಸಿದರು.
ಪಾಕ್ ಪರ ಶಾಹಿನ್ ಅಫ್ರಿದಿ ಎರಡು ವಿಕೆಟ್ ಹಾಗೂ ಅಬ್ರಾರ್ ಅಹ್ಮದ್ ಮತ್ತು ಖುಷ್‌ದಿಲ್ ಷಾ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


