ದುಬೈ: ಇಂದು (ಫೆಬ್ರವರಿ 23) ದುಬೈ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆರಿಸಿಕೊಂಡಿದೆ.
2017ರ ಬಳಿಕ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಇದಾಗಿದ್ದು, ಆ ಟೂರ್ನಿಯಲ್ಲಿ ಫೈನಲ್ ಪಂದ್ಯವಾಡಿದ ಬಳಿಕ ಪುನಃ ಚಾಂಪಿಯನ್ಸ್ ಟ್ರೋಫಿಯಲ್ಲಿ ಬದ್ಧ ವೈರಿಗಳ ಕಾಳಗ ನಡೆಯುತ್ತಿದೆ.
ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ ಸೋತಿರುವ ಕಾರಣ ಸೆಮಿಫೈನಲ್ ಆಸೆ ಜೀವಂತವಾಗಿರಬೇಕೆಂದರೆ ಭಾರತದ ವಿರುದ್ಧ ಗೆಲ್ಲಲೇಬೇಕಾಗಿದ್ದು, ಆರಂಭಿಕರ ವಿಕೆಟ್ ಬಿದ್ದಾಗಿನಿಂದ ನಿಧಾನಗತಿಯಲ್ಲಿ ಆಟವನ್ನಾಡುತ್ತಿದ್ದಾರೆ.
ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಬಾಬರ್ ಅಜಮ್ 23 ಹಾಗೂ ಇಮಾಮ್ ಉಲ್ ಹಕ್ 10 ರನ್ ಗಳಿಸಿ ಔಟ್ ಆದ ಬಳಿಕ ಮೂರನೇ ವಿಕೆಟ್ಗೆ ಜತೆಯಾದ ಮೊಹಮ್ಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್ ಆಮೆ ವೇಗದಲ್ಲಿ ರನ್ ಕಲೆಹಾಕುತ್ತಿದ್ದಾರೆ.
9ನೇ ಓವರ್ನ ಎರಡನೇ ಎಸೆತಕ್ಕೆ ಬಾಬರ್ ಅಜಮ್ ವಿಕೆಟ್ ಬಿದ್ದಾಗ 47 ರನ್ ಗಳಿಸಿದ್ದ ಪಾಕ್ 25 ಓವರ್ಗೆ 99 ರನ್ ಗಳಿಸಿದೆ. ಅಂದರೆ 94 ಎಸೆತಗಳಲ್ಲಿ ಮೊಹಮ್ಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್ ಕೇವಲ 52 ರನ್ ಕಲೆಹಾಕಿದ್ದಾರೆ. ಅದರಲ್ಲಿಯೂ ಮೊಹಮ್ಮದ್ ರಿಜ್ವಾನ್ 50ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು, ನೆಟ್ಟಿಗರು ಇದು ಟೆಸ್ಟ್ ಕ್ರಿಕೆಟ್ ಅಲ್ಲ ಏಕದಿನ ಎಂದು ಈ ಇಬ್ಬರು ಆಟಗಾರರಿಗೂ ಯಾರಾದರೂ ನೆನಪಿಸಿ ಎಂದು ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


