ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಮುಕ್ತಾಯವಾಗಿದೆ. ಪೂಜೆಗಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇಂದು ಬೆಳಗ್ಗೆ ತನಕ ಹಾಸನಾಂಬ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು.
ಗರ್ಭಗುಡಿ ಬಾಗಿಲು ಮುಚ್ಚುವ ಕೊನೆ ಕ್ಷಣದ ತನಕವೂ ಭಕ್ತರು ದೇವಿಯ ದರ್ಶನ ಪಡೆದರು. ಈ ವರ್ಷ ದಾಖಲೆ ಪ್ರಮಾಣದಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಹ ದೇವಿಯ ದರ್ಶನ ಪಡೆದಿದ್ದಾರೆ.
ಹಾಸನಾಂಬೆ ದೇವಿ ದರ್ಶನಕ್ಕೆ ಈ ಬಾರಿ ಬಹಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಂದಾಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ನೇತೃತ್ವದಲ್ಲಿ ಜಿಲ್ಲಾಡಳಿತ ಭಕ್ತರಿಗೆ ಉತ್ತಮ ವ್ಯವಸ್ಥೆ ಮಾಡಿದ್ದು, ಭಕ್ತರು ಸಹ ಮೆಚ್ಚುಗೆ ಸೂಚಿಸಿದ್ದಾರೆ.
ದಾಖಲೆಯ ಭಕ್ತರ ಭೇಟಿ: ದಾಖಲೆ ಪ್ರಮಾಣದಲ್ಲಿ ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತರು ಆಗಮಿಸಿದ್ದರು. ಕಳೆದ ವರ್ಷ 11 ದಿನ ದೇವಿಯ ದರ್ಶನಕ್ಕೆ ಅವಕಾಶವಿತ್ತು ಮತ್ತು 17,47,240 ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದರು.
ಈ ಬಾರಿ ಅಕ್ಟೋಬರ್ 9ರಂದು ದೇವಾಲಯದ ಬಾಗಿಲು ತೆರೆಯಲಾಯಿತು. ಅಕ್ಟೋಬರ್ 10 ರಿಂದ 23ರ ತನಕ ದರ್ಶನಕ್ಕೆ ಅವಕಾಶವಿತ್ತು. ಬುಧವಾರ ಸಂಜೆಯ ಮಾಹಿತಿಯಂತೆ ಒಟ್ಟು 26,06,691 ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಗುರುವಾರ ಮುಂಜಾನೆ ತನಕ ದರ್ಶನ ಪಡೆದ ಭಕ್ತರ ಸಂಖ್ಯೆಯನ್ನು ಇನ್ನೂ ಸೇರಿಸಿಲ್ಲ. ಇಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಿದ ಬಳಿಕ ಮುಂದಿನ ವರ್ಷವೇ ಹಾಸನಾಂಬೆ ದೇವಿ ದರ್ಶನ ಪಡೆಯಲು ಸಾಧ್ಯ. ಬಾಗಿಲು ಮುಚ್ಚಿದ ಬಳಿಕ ಹುಂಡಿ ಹಣದ ಎಣಿಕೆ ಕಾರ್ಯವನ್ನು ಮಾಡಲಾಗುತ್ತದೆ.
ಈ ಬಾರಿ ಹಲವು ದಿನ 2 ಲಕ್ಷಕ್ಕೂ ಅಧಿಕ ಭಕ್ತರು ಮತ್ತು ಅಕ್ಟೋಬರ್ 17ರಂದು 3,61,748 ಭಕ್ತರು ಹಾಸನಾಂಬೆ ದೇವಿ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ. ಅಕ್ಟೋಬರ್ 12, 19, 21, 22ರಂದು ಮಾತ್ರ ಒಂದು ಲಕ್ಷಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿದ್ದಾರೆ.
ಯಾವ ದಿನ ಎಷ್ಟು ಭಕ್ತರು ಭೇಟಿ
- ಅಕ್ಟೋಬರ್ 10 – 58,002
- ಅಕ್ಟೋಬರ್ 11 – 2,07,800
- ಅಕ್ಟೋಬರ್ 12 – 1,45,484
- ಅಕ್ಟೋಬರ್ 13 – 2,29,482
- ಅಕ್ಟೋಬರ್ 14 – 2,43,735
- ಅಕ್ಟೋಬರ್ 15 – 2,46,694
- ಅಕ್ಟೋಬರ್ 16 – 2,58,259
- ಅಕ್ಟೋಬರ್ 17 – 3,61,748
- ಅಕ್ಟೋಬರ್ 18 – 2,16,711
- ಅಕ್ಟೋಬರ್ 19 – 1,26,625
- ಅಕ್ಟೋಬರ್ 20 – 2,02,213
- ಅಕ್ಟೋಬರ್ 21 – 1,50,110
- ಅಕ್ಟೋಬರ್ 22 – 1,59,828
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


