ಆಚಾರ್ಯ ಚಾಣಕ್ಯರನ್ನು ಭಾರತದ ಶ್ರೇಷ್ಠ ರಾಜತಾಂತ್ರಿಕ ಮತ್ತು ವಿದ್ವಾಂಸ ಎಂದು ಪರಿಗಣಿಸಲಾಗುತ್ತದೆ. ಅಂದು ತಮ್ಮ ಬುದ್ಧಿವಂತಿಕೆಯಿಂದ ಚಂದ್ರಗುಪ್ತ ಮೌರ್ಯನನ್ನು ಸಿಂಹಾಸನದ ಮೇಲೆ ಕೂರಿಸಿದ್ದ ಚಾಣಕ್ಯರ ನೀತಿಗಳು ಇಂದಿನ ಆಧುನಿಕ ಯುಗಕ್ಕೂ ಅಷ್ಟೇ ಪ್ರಸ್ತುತವಾಗಿವೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಸೋಲನ್ನೇ ಕಾಣಬಾರದು ಎಂದರೆ ಆತ ಮುಖ್ಯವಾಗಿ ಮೂರು ವಿಷಯಗಳಲ್ಲಿ ಪರಿಣತಿ ಹೊಂದಿರಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಈ ಮೂರು ತತ್ವಗಳನ್ನು ಅಳವಡಿಸಿಕೊಂಡವರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಜಯಶಾಲಿಯಾಗುತ್ತಾರೆ.
ಅಜೇಯರನ್ನಾಗಿ ಮಾಡುವ ಆ ಮೂರು ಮುಖ್ಯ ಸೂತ್ರಗಳು ಇಲ್ಲಿವೆ:
ಗುರಿಯ ಬಗ್ಗೆ ಸ್ಪಷ್ಟತೆ: ಜೀವನದ ಉದ್ದೇಶ ಅಥವಾ ಗುರಿ ಏನು ಎಂಬುದು ಯಾರಿಗೆ ಸ್ಪಷ್ಟವಾಗಿ ತಿಳಿದಿರುತ್ತದೆಯೋ ಅವರು ಎಂದಿಗೂ ದಾರಿ ತಪ್ಪುವುದಿಲ್ಲ. ಅಡೆತಡೆಗಳು ಎದುರಾದರೂ ಅಂತಹವರು ತಮ್ಮ ಗುರಿಯತ್ತ ಸಾಗುತ್ತಾರೆ. ಇವರು ತಮ್ಮ ಸಮಯ ಮತ್ತು ಶಕ್ತಿಯನ್ನು ಅನಗತ್ಯ ವಿಷಯಗಳಿಗೆ ವ್ಯಯ ಮಾಡದೆ, ಕೇವಲ ಯಶಸ್ಸಿಗಾಗಿ ಬಳಸುತ್ತಾರೆ. ಸ್ಪಷ್ಟವಾದ ದೃಷ್ಟಿಕೋನ ಹೊಂದಿರುವವರನ್ನು ಸೋಲಿಸುವುದು ಅಸಾಧ್ಯ ಎಂದು ಚಾಣಕ್ಯರು ಅಭಿಪ್ರಾಯಪಟ್ಟಿದ್ದಾರೆ.
ಮಾತಿನ ಸಮಯ ಪ್ರಜ್ಞೆ: ಎಲ್ಲಿ ಮಾತನಾಡಬೇಕು ಮತ್ತು ಎಲ್ಲಿ ಮೌನವಾಗಿರಬೇಕು ಎಂಬ ಕಲೆ ತಿಳಿದವನು ಎಲ್ಲೆಡೆ ಗೌರವಿಸಲ್ಪಡುತ್ತಾನೆ. ಕೆಲವೊಮ್ಮೆ ಸಾವಿರ ಮಾತುಗಳಿಗಿಂತ ಮೌನವೇ ಶಕ್ತಿಯುತವಾಗಿರುತ್ತದೆ. ಸರಿಯಾದ ಸಮಯದಲ್ಲಿ ಆಡುವ ಮಾತು ವಿಜಯಕ್ಕೆ ದಾರಿಯಾದರೆ, ಅಕಾಲಿಕ ಮಾತು ಸಂಕಷ್ಟಕ್ಕೆ ನಾಂದಿಯಾಗುತ್ತದೆ. ಈ ಮಾತಿನ ಸಮಯ ಪ್ರಜ್ಞೆ ಹೊಂದಿರುವ ವ್ಯಕ್ತಿಯನ್ನು ಯಾರು ಕೂಡ ಸುಲಭವಾಗಿ ಕೆಣಕಲು ಸಾಧ್ಯವಿಲ್ಲ.
ಮಿತ್ರ ಮತ್ತು ಶತ್ರುವಿನ ಗುರುತಿಸುವಿಕೆ: ನಿಮ್ಮ ಸುತ್ತಮುತ್ತಲಿರುವವರಲ್ಲಿ ಯಾರು ನಿಜವಾದ ಹಿತೈಷಿಗಳು ಮತ್ತು ಯಾರು ಬೆನ್ನಿಗೆ ಚೂರಿ ಹಾಕುವ ಶತ್ರುಗಳು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯಕ್ತಿಯನ್ನು ಯಾರೂ ಮೋಸಗೊಳಿಸಲು ಅಥವಾ ಹಾನಿ ಮಾಡಲು ಸಾಧ್ಯವಿಲ್ಲ. ಸುತ್ತಲಿರುವ ಜನರನ್ನು ಸರಿಯಾಗಿ ಅಳೆದು ತೂಗಿ ವ್ಯವಹರಿಸುವವನೇ ನಿಜವಾದ ಜ್ಞಾನಿ ಮತ್ತು ಬಲಿಷ್ಠ ಎಂದು ಚಾಣಕ್ಯ ನೀತಿ ಹೇಳುತ್ತದೆ.
ಈ ಮೂರು ಸರಳ ದಾರಿಗಳನ್ನು ಪಾಲಿಸುವ ವ್ಯಕ್ತಿಯು ಜೀವನದ ಪ್ರತಿ ಹಂತದಲ್ಲೂ ಯಶಸ್ಸಿನ ಶಿಖರ ಏರುತ್ತಾನೆ ಮತ್ತು ಆತನನ್ನು ಸೋಲಿಸುವುದು ಯಾರಿಗೂ ಸಾಧ್ಯವಿಲ್ಲ.


